ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವಾಗಲೇ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆಯೇ? ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಇತ್ತೀಚೆಗೆ ರಾಹುಲ್ ಗಾಂಧಿ, ಅಮರಿಂದರ್ ಸಿಂಗ್ ಅವರನ್ನು ಸ್ಮರಿಸಿದ ಬಳಿಕ ಈ ಚರ್ಚೆ ರಾಜ್ಯ ರಾಜಕಾರಣದಲ್ಲಿ ಮುನ್ನೆಲೆಗೆ ಬಂದಿದೆ.
ಆದಾಗ್ಯೂ ಇಂತಹ ನಡೆ ಬಗ್ಗೆ ಅಧಿಕೃತ ಖಚಿತತೆ ಇಲ್ಲ.
ಸದ್ಯ ಬಿಜೆಪಿಯಲ್ಲಿರುವ ಅಮರಿಂದರ್ ಸಿಂಗ್ ಅವರೇ ಇಂತಹ ಊಹಾಪೋಹಗಳನ್ನು ತಳ್ಳಿಹಾಕಿದ್ದು, ತಾವು ಕಾಂಗ್ರೆಸ್‌ಗೆ ವಾಪಸ್ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೆ ತಲೆದೂರಿರುವ ಈ ಸಂದರ್ಭದಲ್ಲಿ ಕ್ಯಾಪ್ಟನ್ ಮರಳುವ ಚರ್ಚೆಗೆ ಹೆಚ್ಚಿನ ಮಹತ್ವ ಬಂದಿದೆ.
ಇವರಿಬ್ಬರು ತಮ್ಮದೇ ಬೆಂಬಲಿಗರು ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ. ಇವರೊಂದಿಗೆ ಇತರ ನಾಯಕರು ಕೂಡ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಇತ್ತೀಚೆಗೆ ಹಲವು ಕಾಂಗ್ರೆಸ್ ನಾಯಕರು ರಾಣಾ ಗುರ್ಜಿತ್ ಸಿಂಗ್ ಅವರ ನಿವಾಸದಲ್ಲಿ ಸಭೆ ಸೇರಿ, ರಾಜ್ಯ ಘಟಕದ ಕಾರ್ಯವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆಯ ಬಳಿಕ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದ ಮಡಿಲಿಗೆ ಮರಳುವುದಾದರೆ ಅವರನ್ನು ಮೊದಲಿಗೆ ಸ್ವಾಗತಿಸುವುದಾಗಿ ರಾಣಾ ಗುರ್ಜಿತ್ ಹೇಳಿದ್ದರು. ಇವರ ಹೇಳಿಕೆ ಪಂಜಾಬ್ ಕಾಂಗ್ರೆಸ್‌ನ ಒಂದು ವಲಯದಲ್ಲಿ 'ಕ್ಯಾಪ್ಟನ್' ಪ್ರಭಾವ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅಮರಿಂದರ್ ಸಿಂಗ್ (ಪಿಟಿಐ ಸಂಗ್ರಹ ಚಿತ್ರ)
ಅಮರಿಂದರ್ ಸಿಂಗ್ ಅಪಾರ ರಾಜಕೀಯ ಅನುಭವ ಹೊಂದಿದ್ದು ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ ತಂದುಕೊಟ್ಟಿದ್ದರು. ಆದರೆ ಹೈಕಮಾಂಡ್ ಸೂಚನೆಯಂತೆ ಮಧ್ಯದಲ್ಲಿ ಅಧಿಕಾರ ಬಿಟ್ಟುಕೊಟ್ಟರು. ಬಳಿಕ ಅವರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಹಾಗಿದ್ದರೂ ಹಳೆಯ ಕಾಂಗ್ರೆಸ್ ನಾಯಕರ ಜತೆಗೆ ಅವರ ರಾಜಕೀಯ ಸಂಪರ್ಕ ಹಾಗೂ ಪ್ರಭಾವ ಸಂಪೂರ್ಣವಾಗಿ ಕರಗಿಹೋಗಿಲ್ಲ.
2027ರ ಚುನಾವಣೆಗೆ ಪಕ್ಷ ಸಜ್ಜಾಗುತ್ತಿರುವ ಈ ವೇಳೆ, ಪಂಜಾಬ್‌ನ ರಾಜಕೀಯ ಹಾಗೂ ಸಾಮಾಜಿಕ ಸಮೀಕರಣಗಳ ಕುರಿತು ಅಮರಿಂದರ್ ಸಿಂಗ್ ಅವರ ಅನುಭವ ಮತ್ತು ತಿಳಿವಳಿಕೆ ಪಕ್ಷಕ್ಕೆ ಉಪಯುಕ್ತವಾಗಬಹುದು ಎಂದು ಕೆಲ ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಅವರು ಪಕ್ಷದಲ್ಲಿನ ಬಣಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಆಂತರಿಕ ಕಲಹದಿಂದ ಕಾಂಗ್ರೆಸ್ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದೆ. ಅಮರಿಂದರ್- ನವಜೋತ್ ಸಿಂಗ್ ಸಿಧು ನಡುವಿನ ಸಂಘರ್ಷದಿಂದ ಅಮರಿಂದರ್ ಪಕ್ಷ ತೊರೆದಿದ್ದರ ಪರಿಣಾಮ ಕಾಂಗ್ರೆಸ್, ಎಎಪಿ ಎದುರು ಸೋಲುಂಡಿತ್ತು.

