ನವದೆಹಲಿ: ಆರನೇ ತರಗತಿಯಿಂದ ಉದ್ಯೋಗ ಸಾಮರ್ಥ್ಯ ಕೌಶಲ ತರಬೇತಿ ಮತ್ತು ಒಂಬತ್ತನೇ ತರಗತಿಯಿಂದ ವೃತ್ತಿಪರ ಕೋರ್ಸ್‌ಗಳ ಬಗ್ಗೆ ತರಬೇತಿ ನೀಡುವ ಪ್ರಸ್ತಾವವನ್ನು ನೀತಿ ಆಯೋಗವು ಮುಂದಿಟ್ಟಿದೆ.
ಕೌಶಲವು ಸಣ್ಣ ವಯಸ್ಸಿನಲ್ಲೇ ಆರಂಭವಾಗಬೇಕು ಮತ್ತು ಉದ್ಯೋಗ ಸಾಮರ್ಥ್ಯ ಕೌಶಲ ತರಬೇತಿಯನ್ನು ಶಾಲಾ ಹಂತದಲ್ಲಿಯೇ ಅಳವಡಿಸಿಕೊಳ್ಳಬೇಕು.
ಇದು ಉದ್ಯೋಗಾವಕಾಶ ಮತ್ತು ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸಲು ನೆರವಾಗಲಿದೆ ಎಂದು ಹೇಳಿದೆ.
'ವಿಕಸಿತ ಭಾರತ -2047ಕ್ಕಾಗಿ ಕೌಶಲದ ಮರುಕಲ್ಪನೆ' ಎಂಬ ಶೀರ್ಷಿಕೆಯ ವರದಿಯಲ್ಲಿ ಆಯೋಗವು 6ನೇ ತರಗತಿಯಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುವ ಎಲ್ಲರಿಗೂ 'ಸಾಮಾನ್ಯ ಉದ್ಯೋಗ ಸಾಮರ್ಥ್ಯ ಮತ್ತು ಉದ್ಯಮಶೀಲತಾ ಕೌಶಲ'ಗಳನ್ನು (ಜಿಇಇಎಸ್) ಸಾರ್ವತ್ರಿಕವಾಗಿ ಪರಿಚಯಿಸಬಹುದು ಎಂದು ಪ್ರತಿಪಾದಿಸಿದೆ.
10 ಮತ್ತು 12ನೇ ತರಗತಿಯಲ್ಲಿ ನಿಯಮಿತ ಶೈಕ್ಷಣಿಕ ವಿಷಯಗಳಿಗೆ ನೀಡುವಷ್ಟೇ ಪ್ರಾಧಾನ್ಯವನ್ನು ಪ್ರಾಯೋಗಿಕ ಹಾಗೂ ಉದ್ಯೋಗ-ಆಧಾರಿತ ತರಬೇತಿ ಕಲ್ಪಿಸುವುದಕ್ಕೂ ನೀಡಬೇಕು. ಶಿಕ್ಷಣ ಮಂಡಳಿಗಳು ಅದಕ್ಕೆ ತಕ್ಕಂತೆ ಐಚ್ಚಿಕ ವಿಷಯಗಳ ಪಠ್ಯವನ್ನು ಪರಿಷ್ಕರಿಸಬೇಕು ಎಂದು ಸಲಹೆ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಅಡಿಯಲ್ಲಿ 6ನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣ ಮತ್ತು ಉದ್ಯೋಗ ಸಾಮರ್ಥ್ಯ ಕೌಶಲ ತರಬೇತಿ ನೀಡಬೇಕೆಂಬ ಮಾರ್ಗದರ್ಶನವಿದ್ದರೂ, ಭಾರತದಲ್ಲಿ ಪ್ರತಿ 12 ಪ್ರೌಢಶಾಲೆಗಳಲ್ಲಿ ಒಂದು ಶಾಲೆಯಲ್ಲಷ್ಟೇ ಮಕ್ಕಳಿಗೆ ವೃತ್ತಿಪರ ತರಬೇತಿ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
'ಭವಿಷ್ಯದ ಉದ್ಯೋಗಗಳ ಬೇಡಿಕೆಗೆ ಅನುಗುಣವಾದ ಕೌಶಲವನ್ನು ನಾವು ನಮ್ಮ ಮಕ್ಕಳಿಗೆ ನೀಡಿದರೆ, ಭಾರತವು ಜಗತ್ತಿನ 'ಟ್ಯಾಲೆಂಟ್ ಹಬ್' ಆಗಬಲ್ಲದು. ಆ ಮೂಲಕ ನಮ್ಮ ದೇಶದ ಅಭಿವೃದ್ದಿಗೆ ಹಾಗೂ ಜಾಗತಿಕ ಆರ್ಥಿಕತೆಗೆ ಮಾನವ ಸಂಪನ್ಮೂಲವನ್ನು ಒದಗಿಸಬಹುದು' ಎಂದು ನೀತಿ ಆಯೋಗದ ಉಪಾಧ್ಯಕ್ಷ ಅಶೋಕ್ ಕುಮಾರ್ ಲಾಹಿರಿ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
'ಡಿಜಿಟಲ್ ಸ್ಕಿಲ್ ಪಾಸ್‌ಪೋರ್ಟ್'
ಪ್ರತಿ ವಿದ್ಯಾರ್ಥಿಯು ಕಾಲಕ್ರಮೇಣ ಪಡೆಯುವ ಕೌಶಲ ತರಬೇತಿಯನ್ನು ದಾಖಲಿಸಲು 'ಡಿಜಿಟಲ್ ಸ್ಕಿಲ್ ಪಾಸ್‌ಪೋರ್ಟ್' ಪರಿಚಯಿಸುವಂತೆ ಆಯೋಗವು ಸಲಹೆ ನೀಡಿದೆ. ಇದನ್ನು ಆ ವಿದ್ಯಾರ್ಥಿಯ 'ಸ್ವಯಂಪ್ರೇರಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ' (ಅಪಾರ್) ಗುರುತಿನ ಚೀಟಿಗೆ ಜೋಡಿಸಬೇಕು ಎಂದು ತಿಳಿಸಿದೆ.
'ಸ್ಕಿಲ್ ಪಾಸ್‌ಪೋರ್ಟ್ ಒಬ್ಬ ವ್ಯಕ್ತಿಯ ಕಲಿಕೆ, ಕೌಶಲ ತರಬೇತಿಗೆ ಸಂಬಂಧಿಸಿದ ದಾಖಲೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲಿದೆ. ಇದು ಉದ್ಯೋಗ, ಅಪ್ರೆಂಟಿಸ್‌ಶಿಪ್ ಮತ್ತು ಕೌಶಲಾಭಿವೃದ್ದಿಯ ಅವಕಾಶಗಳನ್ನು ಪಡೆಯಲು ನೆರವಾಗುತ್ತದೆ' ಎಂದಿದೆ.

