ಬುಲಡಾಣಾ (PTI):'ದೇಶವನ್ನು ನಿಜವಾದ ಅರ್ಥದಲ್ಲಿ 'ವಿಶ್ವಗುರು'ವನ್ನಾಗಿ ಮಾಡಬೇಕಾದರೆ ಶೋಷಿತ, ತಳಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಅಗತ್ಯವಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಬುಲಡಾಣಾ ಜಿಲ್ಲೆಯ ಖಮ್ಗಾಂವ್‌ನಲ್ಲಿರುವ ಪಾರ್ಧಿ ಸಮುದಾಯದ ವಸತಿ ಶಾಲೆಯಲ್ಲಿ ಕ್ರೀಡಾ ಮೈದಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಭಟ್ಕೆ-ವಿಮುಕ್ತ' (ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳು) ಎಂದು ಕರೆಯುವ ಸಮುದಾಯಗಳು ಒಂದು ಕಾಲದಲ್ಲಿ ಜ್ಞಾನದ ಭಂಡಾರಗಳಾಗಿದ್ದವು. ಇವರು ತಮ್ಮ ಜ್ಞಾನವನ್ನು ನಿಸ್ವಾರ್ಥವಾಗಿ ಹಂಚಿಕೊಳ್ಳಲು ಹೊರಟರು (ವಲಸೆ ಹೋದವರು). ಆದರೆ, ಕಾಲಾನಂತರದಲ್ಲಿ ಸಮಾಜದ ಅಂಚಿಗೆ ತಳ್ಳಲ್ಪಟ್ಟರು' ಎಂದರು.
'ಅಲೆಮಾರಿ ಮತ್ತು ವಿಮುಕ್ತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂನಮ್ಮವರೇ ಆಗಿದ್ದಾರೆ. ಆದ್ದರಿಂದ, ಈ ದೃಷ್ಟಿಕೋನವನ್ನು ಹೊಂದುವುದು ಮತ್ತು ಈ ಜನರ ಜೀವನ ಸುಧಾರಿಸುವಂತೆ ಅವರಿಗಾಗಿ ಏನನ್ನಾದರೂ ಮಾಡುವುದು ನನ್ನ ಕರ್ತವ್ಯವಾಗಿದೆ' ಎಂದು ಹೇಳಿದರು.
'ನಾವು ಭಾರತವನ್ನುವಿಶ್ವಗುರುವನ್ನಾಗಿ ಮಾಡಲು ಬಯಸಿದರೆ, ಈ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರತಿ ಕುಟುಂಬ ಮತ್ತು ವ್ಯಕ್ತಿಗೂ ಶಿಕ್ಷಣ ಸೇರಿದಂತೆ ಸೌಲಭ್ಯಗಳು ಸಿಗಬೇಕು. ಇಡೀ ಸಮಾಜವು ಸರ್ಕಾರವನ್ನು ಅವಲಂಬಿಸದೆ ಈ ಗುರಿಯತ್ತ ಸಾಗಲು ಶ್ರಮಿಸಬೇಕು' ಎಂದು ಸಲಹೆ ನೀಡಿದರು.
'ಭಾರತೀಯ ಸಮಾಜವು ಒಂದು ಕಾಲದಲ್ಲಿ ಸಂಪೂರ್ಣವಾಗಿ ಸಂಘಟಿತವಾಗಿತ್ತು. ಆದರೆ, ಅದು ವಿದೇಶಿ ಆಕ್ರಮಣಕಾರರಿಂದ ಗುಲಾಮಗಿರಿಗೆ ಒಳಗಾಗಿದ್ದು, ವಿಭಜನೆಗೆ ಕಾರಣವಾಯಿತು. ಇದರ ಪರಿಣಾಮವಾಗಿ, ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಂಖ್ಯೆ ಹೆಚ್ಚಾಯಿತು. ಹಾಗಿದ್ದರೂ, ಈ ಸಮುದಾಯಗಳು ಎಂದಿಗೂ ದಾಸ್ಯವನ್ನು ಒಪ್ಪಿಕೊಳ್ಳಲಿಲ್ಲ. ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದರು. ಪಾರ್ಧಿ ಸಮುದಾಯದ ಅಭಿವೃದ್ಧಿಗಾಗಿ ಆರ್‌ಎಸ್‌ಎಸ್ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದೆ' ಎಂದರು.

