ಕಳಪೆ ಅನಿಮೇಷನ್ ಮತ್ತು ಗ್ರಾಫಿಕ್ಸ್‌ನಿಂದ ಟ್ರೋಲ್ ಆದ ಚೀನಾದ 'ನಿಯು ಲೈ' ಸಿನಿಮಾ, ವಿಡಂಬನೆಯನ್ನೇ ಬಂಡವಾಳ ಮಾಡಿಕೊಂಡು ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಯಶಸ್ಸು ಸಾಧಿಸಿದೆ.
ನಿಯು ಲೈ' ಸಿನಿಮಾ ಮುನ್ನೆಲೆಗೆ ಬಂದಿದ್ದು ಹೇಗೆ?
ಈ ಸಿನಿಮಾದ ಕಳಪೆ ಅನಿಮೇಷನ್ ಮತ್ತು ಗ್ರಾಫಿಕ್ಸ್ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ, ಜನರು ಅದನ್ನು ಟ್ರೋಲ್ ಮಾಡಲು ಶುರು ಮಾಡಿದರು. ಇದರಿಂದ ಕುತೂಹಲಗೊಂಡ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಗಳತ್ತ ಧಾವಿಸಿದರು.
ಈ ಸಿನಿಮಾದ ನಿರ್ಮಾಣದ ಹಿಂದಿರುವ ವಿಶೇಷತೆ ಏನು?
ಈ ಸಿನಿಮಾವನ್ನು 'ಜಿನ್ ಯು ಮೆಂಗ್' ಎಂಬುವರು ತಮ್ಮ ತಾಯಿ 'ಸುನ್ ಲಿಫಾನ್' ಅವರೊಂದಿಗೆ ಸೇರಿ ಕೇವಲ ಇಬ್ಬರೇ 5 ವರ್ಷಗಳ ಕಾಲ ಸತತವಾಗಿ ಶ್ರಮಿಸಿ ನಿರ್ಮಿಸಿದ್ದಾರೆ.
ಬಾಕ್ಸ್ ಆಫೀಸ್ ಈ ಸಿನಿಮಾ ಗಳಿಸಿದ್ದೆಷ್ಟು?
ಆರಂಭದಲ್ಲಿ ದಿನಕ್ಕೆ ₹2,500 ಗಳಿಸಲು ಪರದಾಡುತ್ತಿದ್ದ ಈ ಚಿತ್ರ, ನಂತರದ ದಿನಗಳಲ್ಲಿ ₹24.31 ಕೋಟಿಗೂ ಅಧಿಕ ಗಳಿಕೆ ಕಂಡು ಚೀನಾದ ಟಾಪ್ 10 ಅನಿಮೇಷನ್ ಸಿನಿಮಾಗಳ ಪಟ್ಟಿಗೆ ಸೇರಿತು.
ಚೀನಾದಲ್ಲಿ ಈ ಸಿನಿಮಾಗೆ ಇಷ್ಟೊಂದು ಜನಪ್ರಿಯತೆ ಸಿಗಲು ಕಾರಣವೇನು?
ಚೀನೀ ಭಾಷೆಯಲ್ಲಿ 'ನಿಯು ಲೈ' ಎಂದರೆ 'ಮಾರುಕಟ್ಟೆ ಏರಿಕೆಯಾಗುತ್ತಿದೆ' ಎಂಬ ಅರ್ಥವಿರುವುದರಿಂದ, ಶೇರು ಮಾರುಕಟ್ಟೆ ಹೂಡಿಕೆದಾರರು ಸೇರಿದಂತೆ ಹಲವರು ಈ ಸಿನಿಮಾವನ್ನು ಅದೃಷ್ಟದ ಸಂಕೇತವೆಂದು ಭಾವಿಸಿ ವೀಕ್ಷಿಸುತ್ತಿದ್ದಾರೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಚಿತ್ರರಂಗದಲ್ಲಿ ಕಥೆ ಚೆನ್ನಾಗಿದ್ದರೆ ಅಥವಾ ದೃಶ್ಯ ಸಂಕಲನ ಅದ್ಭುತವಾಗಿದ್ದರೆ ಸಿನಿಮಾ ಹಿಟ್ ಆಗುತ್ತದೆ ಎಂಬ ಮಾತಿದೆ. ಆದರೆ, ಕಳಪೆ ಅನಿಮೇಷನ್ ಮತ್ತು ನಗು ತರಿಸುವ ಗ್ರಾಫಿಕ್ಸ್‌ನಿಂದಲೇ ಟ್ರೋಲ್ ಆಗಿ, ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ ಚೀನಾದ ಅನಿಮೇಷನ್ ಸಿನಿಮಾ 'ನಿಯು ಲೈ' (Niu Lai).
ಆರಂಭದಲ್ಲಿ ಯಾರೂ ನೋಡದ ಈ ಸಿನಿಮಾ, ಇದೀಗ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ'ಗೆ ಪೈಪೋಟಿ ನೀಡುತ್ತಿದೆ. ಅಷ್ಟೇ ಅಲ್ಲದೆ, ಸ್ಪೈಡರ್‌ಮ್ಯಾನ್ ಸರಣಿಯ 'ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾಗಿಂತ ಹೆಚ್ಚಿನ ಗಳಿಕೆ ಕಂಡಿದೆ.
ದಿನಕ್ಕೆ ₹2,500 ಗಳಿಸುತ್ತಿದ್ದ ಸಿನಿಮಾ ಮುನ್ನೆಲೆಗೆ ಬಂದಿದ್ದು ಹೇಗೆ?
ಆಗಸ್ಟ್ 5ರಂದು ಬಿಡುಗಡೆಯಾಗಿದ್ದ 86 ನಿಮಿಷದ ಈ ಸಿನಿಮಾ, ಹಸುವಿನ ಕರುವೊಂದರ ವಿಚಿತ್ರ ಪಯಣದ ಕಥೆಯನ್ನು ಒಳಗೊಂಡಿದೆ. ಬಿಡುಗಡೆಯಾದ ಮೊದಲ 10 ದಿನಗಳಲ್ಲಿ ಈ ಚಿತ್ರ ದಿನಕ್ಕೆ ಕೇವಲ 200 ಯುವಾನ್ ಎಂದರೆ ಭಾರತೀಯ ರೂಪಾಯಿಗೆ ಹೋಲಿಸಿದರೆ ₹2,500 ಗಳಿಸಲು ಹೆಣಗಾಡುತ್ತಿತ್ತು.
ಆದರೆ ಆಗಸ್ಟ್ 14ರ ವೇಳೆಗೆ ಈ ಸಿನಿಮಾದ ಕೆಲವು ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾದವು. ಈ ಸಿನಿಮಾದಲ್ಲಿನ ಗ್ರಾಫಿಕ್ಸ್, ಸಂಭಾಷಣೆ ಕೇಳಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡತೊಡಗಿದರು. 'ಎಐ (AI) ಯುಗದಲ್ಲಿ ಇಷ್ಟೊಂದು ಕಳಪೆ ಸಿನಿಮಾ ಮಾಡಲು ಹೇಗೆ ಸಾಧ್ಯ?', 'ಇದು 2026ರ ಅತ್ಯಂತ ಕೆಟ್ಟ ಸಿನಿಮಾ' ಎಂದೆಲ್ಲಾ ಕಮೆಂಟ್ ಮಾಡಲು ಶುರು ಮಾಡಿದರು.
ಆ ಬೆನ್ನಲ್ಲೇ ಪ್ರೇಕ್ಷಕರು ಈ ಸಿನಿಮಾ ನಿಜವಾಗಿಯೂ ಹೇಗಿದೆ ಎಂದು ಕುತೂಹಲದಿಂದ ಚಿತ್ರಮಂದಿರದತ್ತ ಧಾವಿಸತೊಡಗಿದರು. ನೆಟ್ಟಿಗರು, 'ಸಿನಿಮಾ ಎಷ್ಟು ಕೆಟ್ಟದಾಗಿದೆಯೆಂದರೆ, ಅದೇ ನಮಗೆ ನಗು ತರಿಸುತ್ತಿದೆ' ಎಂದು ರೇಟಿಂಗ್ ನೀಡಲು ಶುರು ಮಾಡಿದರು.
ಬಾಕ್ಸ್ ಆಫೀಸ್‌ನಲ್ಲಿ ನಿಯು ಲೈ ಕೋಟಿ ಲೂಟಿ..
ಆಗಸ್ಟ್ 15ರ ಹೊತ್ತಿಗೆ ಈ ಸಿನಿಮಾದ ದಿನದ ಗಳಿಕೆ ದಿಢೀರನೆ ₹1 ಕೋಟಿಗೆ ಏರಿಕೆಯಾಯಿತು. ಬಳಿಕ ಆಗಸ್ಟ್ 17ರ ವೇಳೆಗೆ ಈ ಚಿತ್ರ ₹24.31 ಕೋಟಿಗೂ ಹೆಚ್ಚು ಗಳಿಸಿ, 2026ರ ಚೀನಾದ ಟಾಪ್ 10 ಅನಿಮೇಷನ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಯಿತು.
ಆಗಸ್ಟ್ 18ರಂದು ಚೀನಾದ ಬಾಕ್ಸ್ ಆಫೀಸ್‌ನಲ್ಲಿ 4ನೇ ಸ್ಥಾನಕ್ಕೇರಿದ 'ನಿಯು ಲೈ', 'ಸ್ಪೈಡರ್‌ಮ್ಯಾನ್' ಸಿನಿಮಾವನ್ನೇ ಹಿಂದಿಕ್ಕಿ 'ದಿ ಒಡಿಸ್ಸಿ' ಜೊತೆ ಪೈಪೋಟಿಗೆ ಇಳಿಯಿತು.
ವಿಶೇಷವೆಂದರೆ, ಈ ಸಿನಿಮಾವನ್ನು ಜಿನ್ ಯು ಮೆಂಗ್ ಎನ್ನುವ ನಿರ್ದೇಶಕ ತಮ್ಮ ತಾಯಿ ಸುನ್ ಲಿಫಾನ್ ಅವರೊಂದಿಗೆ ಸೇರಿ 5 ವರ್ಷಗಳ ಕಾಲ ನಿರ್ಮಿಸಿದ್ದಾರೆ. ಕಥೆ, ನಿರ್ದೇಶನ, ನಿರ್ಮಾಣ, ಸಂಭಾಷಣೆ, ಅನಿಮೇಷನ್, ಎಡಿಟಿಂಗ್‌ನಿಂದ ಹಿಡಿದು ಎಲ್ಲವನ್ನೂ ಈ ತಾಯಿ-ಮಗ ಇಬ್ಬರೇ ಮಾಡಿದ್ದಾರೆ.

