ತಿರುವನಂತಪುರ: ಮಂಗಳೂರು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿರುವ ರೈಲ್ವೆ ಮಂಡಳಿಯ ಆದೇಶವು ಕೇರಳ ಮತ್ತು ಕರ್ನಾಟಕದ ನಡುವೆ ಹೊಸ ಸಂಘರ್ಷವನ್ನು ಹುಟ್ಟುಹಾಕಿದೆ. ಈ ನಿರ್ಧಾರವನ್ನು ಪ್ರತಿಭಟಿಸಿ ಕೇರಳದ ಸಂಸದರು ತಿರುಓಣಂ ದಿನದಂದು ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದರೆ, ಕರ್ನಾಟಕದ ವಾಣಿಜ್ಯ ಹಾಗೂ ರಾಜಕೀಯ ಮುಖಂಡರು ರಾಜ್ಯವು ತನಗೆ ಸಿಕ್ಕಿರುವ ಸೌಲಭ್ಯವನ್ನು ಉಳಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
ಬುಧವಾರ ಪಾಲಕ್ಕಾಡ್ ವಿಭಾಗೀಯ ರೈಲ್ವೆ ಪ್ರಬಂಧಕರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಯುಡಿಎಫ್ ಸಂಸದರಾದ ಎಂ.ಕೆ.ರಾಘವನ್, ಇ.ಟಿ.ಮುಹಮ್ಮದ್ ಬಷೀರ್ ಮತ್ತು ಶಫಿ ಪರಂಬಿಲ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವರ್ಗಾವಣೆಯು ಅನ್ಯಾಯದಿಂದ ಕೂಡಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಇದು ಮಲಬಾರ್ ಹಾಗೂ ಕೇರಳಂದಾದ್ಯಂತ ರೈಲ್ವೆ ಅಭಿವೃದ್ಧಿ ಮತ್ತು ಪ್ರಯಾಣಿಕರ ಹಿತಾಸಕ್ತಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಆ.21ರ ಆದೇಶವನ್ನು ತಡೆಹಿಡಿಯಬೇಕು ಮತ್ತು ಕೇರಳ ಸರಕಾರ ಹಾಗೂ ರಾಜ್ಯದ ಸಂಸದರೊಂದಿಗೆ ಅಧಿಕೃತ ಸಮಾಲೋಚನೆ ನಡೆಸುವವರೆಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಅವರು ಆಗ್ರಹಿಸಿದ್ದಾರೆ. ಮಂಗಳೂರು ಬಂದರು ಮತ್ತು ಅದರ ಸುತ್ತಮುತ್ತಲಿನ ರೈಲು ನಿಲ್ದಾಣಗಳ ಮೂಲಕ ಬರುತ್ತಿದ್ದ ಸುಮಾರು 1,000 ಕೋಟಿ ರೂ.ಗಳಿಂದ 1,100 ಕೋಟಿ ರೂ.ವರೆಗಿನ ವಾರ್ಷಿಕ ಆದಾಯವನ್ನು ಕೇರಳಂ ಕಳೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ರೈಲ್ವೆ ಮಂಡಳಿಯ ಆದೇಶದಂತೆ, ಅಕ್ಟೋಬರ್ 1ರಿಂದ ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಎರಡೂ ವಲಯಗಳ ನಡುವಿನ ಬದಲಾವಣೆಯ ಸ್ಥಳ (ಇಂಟರ್ಚೇಂಜ್ ಪಾಯಿಂಟ್) ಪಡೀಲ್ನಿಂದ ಉಳ್ಳಾಲಕ್ಕೆ ಬದಲಾಗಲಿದೆ. ಆದರೆ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿರುವ ತೋಕೂರು ನಿಲ್ದಾಣವು ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್ಚೇಂಜ್ ಪಾಯಿಂಟ್ ಆಗಿ ಮುಂದುವರಿಯಲಿದೆ.

