HEALTH TIPS

ಸಿನಿಮಾಗಳಲ್ಲಿ ಅತಿಯಾದ ಹಿಂಸೆ, ಮಹಿಳಾ ವಿರೋಧಿ ಧೋರಣೆ ನಿಲ್ಲಿಸಿ: 'ಟಾಕ್ಸಿಕ್' ಚಿತ್ರ ಉಲ್ಲೇಖಿಸಿ CBFC ವಿರುದ್ಧ ಅಣ್ಣಾಮಲೈ ಕಿಡಿ

 ‘ವಿ ದಿ ಲೀಡರ್ಸ್’ ಸಂಸ್ಥೆಯ ಸಂಸ್ಥಾಪಕ ಕೆ. ಅನ್ನಾಮಲೈ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇತ್ತೀಚಿನ ಪ್ಯಾನ್-ಇಂಡಿಯಾ ಆ್ಯಕ್ಷನ್ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಅತಿಯಾದ ಹಿಂಸೆ ಹಾಗೂ ಮಹಿಳಾ ವಿರೋಧಿ (ಮಿಸೋಜಿನಿಸ್ಟಿಕ್) ಧೋರಣೆಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.


ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಟ್ಟುನಿಟ್ಟಿನ ಸೆನ್ಸಾರ್ ನಿಯಮಗಳು ಜಾರಿಯಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ವಯೋಮಾನದ ಪ್ರೇಕ್ಷಕರು ನೋಡುತ್ತಿರುವ ಚಿತ್ರಗಳಲ್ಲಿ ಅತಿಯಾದ ಹಿಂಸೆ, ಮಹಿಳಾ ವಿರೋಧಿ ಧೋರಣೆಗಳು ಹಾಗೂ ಅಸಹನೀಯವೆನಿಸುವ ಹಲವು ದೃಶ್ಯಗಳನ್ನು ಪದೇಪದೇ ತೋರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಆದರೆ, ತಾವು ಚಿತ್ರಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅಣ್ಣಾಮಲೈ, ನಟ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಸೆನ್ಸಾರ್ ಮಂಡಳಿ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಅದೇ ರೀತಿ, ‘ಎ’ ಪ್ರಮಾಣಪತ್ರ ಪಡೆದ ಚಿತ್ರಗಳ ಪ್ರದರ್ಶನಕ್ಕೆ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಅವಕಾಶ ನೀಡದಂತೆ ಸಿಂಗಲ್‌ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರಿಗೆ ಅವರು ಮನವಿ ಮಾಡಿದರು. ಈ ನಿಯಮವನ್ನು ಬಹುತೇಕ ಸಿಂಗಲ್‌ಸ್ಕ್ರೀನ್ ಮಾಲೀಕರು ಪಾಲಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಪರದೆಯ ಮೇಲಿನ ಅತಿಯಾದ ಹಿಂಸೆ ಮತ್ತು ಪುರುಷ ಪ್ರಧಾನ ಧೋರಣೆಗಳು ಯುವ ಪೀಳಿಗೆಯನ್ನು ತಪ್ಪು ದಾರಿಗೆಳೆಯುವ ಅಪಾಯವಿದೆ ಎಂದು ಎಚ್ಚರಿಸಿದರು.

ಚಿತ್ರಗಳಲ್ಲಿ ಮಹಿಳೆಯರನ್ನು ಕೇವಲ ವಸ್ತುವಿನಂತೆ ಬಿಂಬಿಸುವ ಪ್ರವೃತ್ತಿಯನ್ನೂ ಬಹಿರಂಗವಾಗಿ ಟೀಕಿಸಿದರು. ಮಹಿಳಾ ವಿರೋಧಿ ಧೋರಣೆಗಳನ್ನು ಸಾಮಾನ್ಯಗೊಳಿಸುವುದು ಪ್ರೇಕ್ಷಕರ ಅನುಭವವನ್ನು ಗಂಭೀರವಾಗಿ ಹದಗೆಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಪುರುಷರು ಒಂದೇ ವೇಳೆ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದನ್ನು ವೈಭವೀಕರಿಸುವ ಚಿತ್ರಣಗಳು ನೈಜ ಪ್ರಗತಿಗೆ ಧಕ್ಕೆ ತರುತ್ತವೆ ಎಂದೂ ಅವರು ಹೇಳಿದರು.

ಅಣ್ಣಾಮಲೈ ಅವರ ಈ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವರು ಅವುಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುವುದರ ಜತೆಗೆ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅತಿಯಾದ ಹಿಂಸೆ, ಸ್ಪಷ್ಟ ರಕ್ತಪಾತದ ದೃಶ್ಯಗಳು ಹಾಗೂ ಮಹಿಳೆಯರ ವಸ್ತೂಕರಣದ ಬಗ್ಗೆ ಚಿತ್ರಪ್ರೇಮಿಗಳ ಒಂದು ವರ್ಗದಿಂದ ಹೆಚ್ಚುತ್ತಿರುವ ಆಕ್ಷೇಪಗಳ ನಡುವೆಯೇ ಈ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಇಂತಹ ಅಂಶಗಳನ್ನು ಜನಪ್ರಿಯತೆ ಗಳಿಸುವ ಸುಲಭ ಮಾರ್ಗವಾಗಿ ಚಿತ್ರನಿರ್ಮಾಪಕರು ಬಳಸುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

‘ಟಾಕ್ಸಿಕ್’ ಚಿತ್ರವನ್ನು ಸುತ್ತುವರೆದಿರುವ ಆನ್‌ಲೈನ್ ಚರ್ಚೆಯ ನಡುವೆಯೇ ಅಣ್ಣಾಮಲೈ ಅವರ ಹೇಳಿಕೆಗಳು ಹೊರಬಿದ್ದಿವೆ. ಚಿತ್ರದ ‘ತಬಾಹಿ’ ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ನಡುವಿನ ದೃಶ್ಯಗಳನ್ನು ಉಲ್ಲೇಖಿಸಿ, ಕೆಲ ಚಿತ್ರಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries