ನವದೆಹಲಿ: 'ರಾಮಮಂದಿರದಲ್ಲಿ ದೇಣಿಗೆ ಮತ್ತು ಹುಂಡಿ ಕಳ್ಳತನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ' ಎಂದು ಮೊದಲು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ಮೇಲೆ, ರಸ್ತೆಯಲ್ಲಿ ಜಗಳವಾಡಿದ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಇದನ್ನು ರದ್ದುಪಡಿಸುವಂತೆ ಕೋರಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ತ್ರಿಸದಸ್ಯ ಪೀಠದ ಮುಂದೆ ಅಭಿಷೇಕ್ ಪರ ವಕೀಲರು ವಾದ ಮಂಡಿಸಿದರು. ತುರ್ತಾಗಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದೂ ಮನವಿ ಮಾಡಿದರು. ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತುಕೊಳ್ಳುವುದಾಗಿ ಪೀಠ ಸೋಮವಾರ ಹೇಳಿತು.
'ಅವರ ಮೇಲೆ ಈಗಾಗಲೇ ಇತರ ವಿಷಯಗಳಿಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅವರ ಮನೆಯ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದ್ದಾರೆ' ಎಂದು ಪೀಠದ ಗಮನಕ್ಕೆ ತಂದರು.
'ಸ್ವತಂತ್ರವಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ನನ್ನನ್ನು ಹಿಂಸಿಸಲು ಈ ರೀತಿ ಪ್ರಕರಣ ದಾಖಲಿಸಲಾಗುತ್ತಿದೆ. ಬಂಧನದಿಂದ ರಕ್ಷಣೆ ನೀಡುವಂತೆ ಹಾಗೂ ನನ್ನ ಮೇಲೆ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಬೇಕು' ಎಂದು ಅಭಿಷೇಕ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ತಿಂಗಳ ಮೊದಲ ವಾರ ಅಭಿಷೇಕ್ ಅವರ ಮೇಲೆ ಪ್ರಕರಣ ದಾಖಲಾಗಿತ್ತು.


