ಭುವನೇಶ್ವರ: 'ಜೆನ್ ಝೀ'ಗಳನ್ನು ದಾರಿತಪ್ಪಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ಬಾಹ್ಯ ಶಕ್ತಿಗಳ ಬಲೆಗೆ ಬೀಳದಂತೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಯುವಜನರಿಗೆ ಎಚ್ಚರಿಸಿದ್ದಾರೆ.
ರಾಜ್ಯ ಮಟ್ಟದ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಮಾದಕ ವ್ಯಸನ ಮತ್ತು ನಕಾರಾತ್ಮಕ ಪ್ರಚಾರಗಳ ಮೂಲಕ ಬಾಹ್ಯ ಶಕ್ತಿಗಳು ದೇಶದ ಯುವಕರನ್ನು ದಾರಿತಪ್ಪಿಸುತ್ತಿವೆ' ಎಂದಿದ್ದಾರೆ.
ಭಾರತದ ಯುವಕರು ದೇಶಪ್ರೇಮಿಗಳಾಗಿದ್ದಾರೆ. ದೇಶವನ್ನು ಮುನ್ನಡೆಸಲು ಶ್ರಮಿಸುತ್ತಿದ್ದಾರೆ. ಆದರೆ ಡಿಜಿಟಲ್ ಯುಗದಲ್ಲಿ ಅವರು ಬಾಹ್ಯ ಶಕ್ತಿಗಳಿಂದ ದಾರಿತಪ್ಪುತ್ತಿದ್ದಾರೆ. ವಿದೇಶಿ ನೆಲದಿಂದ ಕಾರ್ಯಾಚರಣೆ ನಡೆಸುತ್ತಾ, ಜಾಲತಾಣಗಳ ಮೂಲಕ ಅವರನ್ನು ದಾರಿತಪ್ಪಿಸಲು ಯತ್ನಿಸುತ್ತಿರುವ ಅದೃಶ್ಯ ಶತ್ರುಗಳ ಬಗ್ಗೆ ಎಚ್ಚರದಿಂದಿರುವಂತೆ ನಾನು ಅವರಿಗೆ ಕರೆ ನೀಡುತ್ತೇನೆ ಎಂದಿದ್ದಾರೆ.
ಈ ಅದೃಶ್ಯ ಶಕ್ತಿಗಳು ತಮ್ಮ ಗುರಿಯಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಯಾವ ಬಾಹ್ಯ ಶಕ್ತಿಯೂ ಭಾರತದ ಯುವಕರನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಒಗ್ಗಟ್ಟಿನಿಂದಿದ್ದು, ಯುವಕರು ದೇಶಪ್ರೇಮಕ್ಕೆ ಮೊದಲ ಆದ್ಯತೆ ನೀಡಬೇಕು. ಇಂತಹ ಶಕ್ತಿಗಳಿಂದ ದೂರವಿದ್ದು, ದೇಶದ ಐಕ್ಯತೆಗಾಗಿ ಶ್ರಮಿಸಬೇಕು. ದೇಶವನ್ನು 'ವಿಶ್ವಗುರು'ವನ್ನಾಗಿ ಮಾಡುವ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದ್ದಾರೆ.

