ನವದೆಹಲಿ: ದೇಶದಲ್ಲಿ ಎಚ್1ಎನ್1ನ ಹೊಸ ತಳಿ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮೂಲಗಳು ಭಾನುವಾರ ತಿಳಿಸಿವೆ. ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದೂ ಅದು ಹೇಳಿದೆ.
ದೆಹಲಿ ಮತ್ತು ದೇಶದ ಇತರೆಡೆ ಹಂದಿ ಜ್ವರ ಹೆಚ್ಚುತ್ತಿದೆ ಎಂದು ಅದು ತಿಳಿಸಿದೆ.
ಸದ್ಯ ಕಂಡುಬಂದಿರುವ ಎಚ್1ಎನ್1 ಅನ್ನು ತಡೆಯಲು ಶಿಫಾರಸು ಮಾಡಲಾದ ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದೂ ಐಸಿಎಂಆರ್ ಮೂಲಗಳು ತಿಳಿಸಿವೆ.
ಎಚ್1ಎನ್1 ಸೇರಿದಂತೆ ಋತುಮಾನದ ವೈರಾಣು ಕಾಯಿಲೆಗಳು ತನ್ನಷ್ಟಕ್ಕೆ ತಾನೇ ವಾಸಿಯಾಗುತ್ತವೆ. ಜ್ವರ, ಕೆಮ್ಮು, ತಲೆನೋವು ಮತ್ತು ಮೈಕೈ ನೋವು ಸಾಮಾನ್ಯ ಲಕ್ಷಣಗಳಾಗಿವೆ. ಸೂಕ್ತ ಆರೈಕೆ ಮತ್ತು ವಿಶ್ರಾಂತಿಯಿಂದಲೇ ಜನ ಚೇತರಿಸಿಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.
ಆದರೂ, ಮಕ್ಕಳು, ವೃದ್ಧರು, ದೀರ್ಘ ಕಾಲೀನ ಆರೋಗ್ಯ ಸಮಸ್ಯೆ ಹೊಂದಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಒಂದೊಮ್ಮೆ ಈ ರೋಗಲಕ್ಷಣಗಳು ಕಡಿಮೆಯಾಗದಿದ್ದರೆ, ಗಂಭೀರ ಸ್ಥಿತಿಗೆ ಬಂದರೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.
ನವದೆಹಲಿಯಲ್ಲಿ ಈವರೆಗೆ 1,777 ಎಚ್1ಎನ್1 ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಜನರಿಗೆ ಸಲಹೆ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ಸ್ವಚ್ಛತೆ ಕಾಪಾಡುವಂತೆ, ಜನಸಂದಣಿ ಪ್ರದೇಶದಿಂದ ದೂರವಿರುವಂತೆ ಮತ್ತು ಸೂಕ್ತ ವೈದ್ಯಕೀಯ ಸಲಹೆ ಪಡೆಯುವಂತೆ ಸೂಚಿಸಿದೆ.

