ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಹತ್ಯೆಗೀಡಾದ ಆರು ಮಂದಿ ನಾಗಾ ಪ್ರಜೆಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನಾಗಾ ಸಮುದಾಯದವರು ಗುರುವಾರ ನಡೆಸಿದ ಶಾಂತಿಯುತ ಧರಣಿ ಹಿಂಸಾಚಾರಕ್ಕೆ ತಿರುಗಿದ ಘಟನೆ ಮಣಿಪುರದ ಕಾಂಗ್ಲಾತೋಂಗ್ಬಿಯಲ್ಲಿ ನಡೆದಿದೆ.
ಹಿಂಸಾಚಾರ ನಿರತ ಜನರ ಗುಂಪನ್ನು ಚದುರಿಸಲು ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಅಶ್ರುವಾಯು ಪ್ರಯೋಗ ನಡೆಸಿದ್ದು, ನಾಲ್ವರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಂಫಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರು ಮಂದಿ ನಾಗಾ ನಾಗರಿಕರ ಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುನೈಟೆಡ್ ನಾಗಾ ಕೌನ್ಸಿಲ್ (UNC) ಪ್ರತಿಭಟನೆ ಆಯೋಜಿಸಿತ್ತು. ನಾಗಾ ಸಮುದಾಯದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮೇ 13ರಂದು ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಿಂದ ಆರು ಮಂದಿ ನಾಗಾ ಸಮುದಾಯದ ನಾಗರಿಕರನ್ನು ಅಪಹರಿಸಲಾಗಿತ್ತು. ಜೂನ್ 10ರಂದು ಕುಕಿ-ಝೊ ಗ್ರಾಮದ ಬಳಿ ಅವರ ಮೃತದೇಹಗಳು ಪತ್ತೆಯಾಗಿದ್ದವು. ಇದಕ್ಕೂ ಮುನ್ನ, ಸುಮಾರು ಒಂದು ತಿಂಗಳ ಹಿಂದೆ ಸೇನಾಪತಿ ಜಿಲ್ಲೆಯಲ್ಲಿ ಸಶಸ್ತ್ರ ಗುಂಪೊಂದರಿಂದ ಅಪಹರಣಕ್ಕೊಳಗಾಗಿದ್ದ 14 ಮಂದಿ ಕುಕಿ ನಾಗರಿಕರನ್ನು ಬಿಡುಗಡೆಗೊಳಿಸಿದ ಒಂದು ದಿನದ ಅಂತರದಲ್ಲಿ ಈ ಘಟನೆ ನಡೆದಿತ್ತು.
ಈ ಘಟನೆಯ ಕುರಿತು ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆ ನಡೆಸಬೇಕು ಎಂಬ ತನ್ನ ಬೇಡಿಕೆಯನ್ನು ನಾಗಾ ಸ್ಟೂಡೆಂಟ್ಸ್ ಫೆಡರೇಷನ್ ಪುನರುಚ್ಚರಿಸಿದೆ. ಸಶಸ್ತ್ರ ಕುಕಿ ಬಂಡುಕೋರರಿಂದ ಅಪಹರಣಕ್ಕೊಳಗಾಗಿ, ಕಿರುಕುಳ ಮತ್ತು ಹತ್ಯೆಗೀಡಾದ ಆರು ಮಂದಿ ನಾಗಾ ಸಂತ್ರಸ್ತರಿಗೆ ನ್ಯಾಯ ಸಿಗದೆ ಬಹಳ ದಿನಗಳಿಂದ ಕಾಯುತ್ತಿರುವುದು ಸಮುದಾಯದಲ್ಲಿ ತೀವ್ರ ನೋವು ಮತ್ತು ದುಃಖಕ್ಕೆ ಕಾರಣವಾಗಿದೆ ಎಂದು ನಾಗಾ ಸ್ಟೂಡೆಂಟ್ಸ್ ಫೆಡರೇಷನ್ ಹೇಳಿದೆ.

