ನವದೆಹಲಿ: ಹಣದ ಅಕ್ರಮ ವರ್ಗಾವಣೆ ತಡೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದ ಕಾರಣಕ್ಕೆ ವರ್ಚುವಲ್ ಡಿಜಿಟಲ್ ಆಸ್ತಿ ಸೇವೆ ಒದಗಿಸುವ 15 ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಹಣಕಾಸು ಗುಪ್ತಚರ ಘಟಕವು ನೋಟಿಸ್ ಜಾರಿಗೊಳಿಸಿದೆ.
ಈ ಸಂಸ್ಥೆಗಳು ತಮ್ಮ ಆಯಪ್‌ಗಳನ್ನು ಹಾಗೂ ಯುಆರ್‌ಎಲ್‌ಗಳನ್ನು ಸ್ಥಗಿತಗೊಳಿಸಬೇಕು ಎಂದು ಘಟಕವು ಸೂಚಿಸಿದೆ.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವರ್ಚುವಲ್ ಡಿಜಿಟಲ್ ಆಸ್ತಿಗಳ ಹಾಗೂ ಕರೆನ್ಸಿಗಳ ವಿನಿಮಯದಲ್ಲಿ, ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆಯಲ್ಲಿ ತೊಡಗಿರುವ ಈ ಬಗೆಯ ಸಂಸ್ಥೆಗಳು ಘಟಕದಲ್ಲಿ ನೋಂದಾಯಿಸಿಕೊಳ್ಳಬೇಕು. ಅವು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಗೆ (ಪಿಎಂಎಲ್‌ಎ) ಅನುಗುಣವಾಗಿ ನಡೆದುಕೊಳ್ಳಬೇಕು.
ಈ ಬಗೆಯ ಕಂಪನಿಗಳು ಭಾರತದಲ್ಲಿ ಭೌತಿಕವಾದ ಅಸ್ತಿತ್ವ ಹೊಂದಿಲ್ಲದಿದ್ದರೂ ನಿಯಮ ಪಾಲನೆ ಕಡ್ಡಾಯ. ಪಿಎಂಎಲ್‌ಎ ಕಾನೂನಿನ ಸೆಕ್ಷನ್ 13ರ ಅಡಿಯಲ್ಲಿ ನಿಯಮ ಪಾಲನೆ ಮಾಡದೆ ಇದ್ದುದಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ನೋಟಿಸ್ ಜಾರಿಯಾದ ಸಂಸ್ಥೆಗಳ ಪಟ್ಟಿಯಲ್ಲಿ ವೀಕ್ಸ್ ಇಂಟರ್‌ನ್ಯಾಷನಲ್ ಎಕ್ಸ್‌ಚೇಂಜ್, ಬಿಎಲ್‌ಎಫ್ ಗ್ಲೋಬಲ್, ಬಿಟುನಿಕ್ಸ್ ಎಲ್‌ಎಲ್‌ಸಿ, ಡಿಜಿಫಿನೆಕ್ಸ್ ಲಿಮಿಟೆಡ್, ಫಿನ್‌ಸೆವೆನ್ ಸಿಜೆಡ್ ಕೂಡ ಸೇರಿವೆ.

