HEALTH TIPS

ಚುನಾವಣಾ ದೇಣಿಗೆ ಹಗರಣ:3 ರಾಜಕೀಯ ಪಕ್ಷಗಳ ವಿರುದ್ಧ FIR ದಾಖಲಿಸಿದ ಗುಜರಾತ್ ಸಿಐಡಿ

ಅಹಮದಾಬಾದ್: 2022 ರಿಂದ 2025ರ ಹಣಕಾಸು ವರ್ಷಗಳಲ್ಲಿ ಸರ್ಕಾರಿ ಖಜಾನೆಗೆ ಸುಮಾರು ₹314 ಕೋಟಿ ನಷ್ಟ ಉಂಟುಮಾಡಿರುವ 'ಚುನಾವಣಾ ದೇಣಿಗೆ ಹಗರಣ'ಕ್ಕೆ ನೆರವು ನೀಡಿದ ಆರೋಪದ ಮೇಲೆ ಹೆಸರಿಗಷ್ಟೇ ಇದ್ದ ಮೂರು ರಾಜಕೀಯ ಪಕ್ಷಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಗುಜರಾತ್ ಸಿಐಡಿ ತಿಳಿಸಿದೆ.

ಆನಂದ್ ಮೂಲದ ಸ್ವತಂತ್ರತಾ ಅಭಿವ್ಯಕ್ತಿ ಪಕ್ಷ(ಎಸ್‌ಎಪಿ) ಅಹಮದಾಬಾದ್ ಮೂಲದ ಸತ್ಯವಾದಿ ರಕ್ಷಕ್ ಪಕ್ಷ(ಎಸ್‌ಆರ್‌ಪಿ) ಮತ್ತು ಗರೀಬ್ ಕಲ್ಯಾಣ್ ಪಕ್ಷ(ಜೆಕೆಪಿ) ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಆದಾಯ ತೆರಿಗೆ ಇಲಾಖೆ ನೀಡಿದ ದೂರುಗಳ ಆಧಾರದ ಮೇಲೆ ಈ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ದೂರಿನ ಪ್ರಕಾರ ಎಸ್‌ಎಪಿ, ಅದರ ಪದಾಧಿಕಾರಿಗಳು, ಒಬ್ಬ ತೆರಿಗೆ ಸಲಹೆಗಾರ ಮತ್ತು ಒಬ್ಬ ಸಿಎ ಒಳಗೊಂಡ ತಂಡವು ನಕಲಿ ಪಕ್ಷದ ಹೆಸರಲ್ಲಿ ₹519 ಕೋಟಿ ದೇಣಿಗೆ ಹಾಗೂ ₹155 ಕೋಟಿ ತೆರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಎಫ್‌ಐಆರ್‌ನಲ್ಲಿ ಅಹಮದಾಬಾದ್ ಮೂಲದ ಜೆಕೆಪಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಹಾಗೂ ಮೂವರು ಸಿಎಗಳು ಸೇರಿದಂತೆ ಒಂಬತ್ತು ಜನರ ಹೆಸರುಗಳಿವೆ. ಇವರು ₹62 ಕೋಟಿ ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಮೂರನೇ ಎಫ್‌ಐಆರ್‌ನಲ್ಲಿ ಎಸ್‌ಆರ್‌ಪಿಯ ಮೂವರು ಪದಾಧಿಕಾರಿಗಳು ಮತ್ತು ಒಬ್ಬ ಅಕೌಂಟೆಂಟ್ ವಿರುದ್ಧ ದೂರು ದಾಖಲಾಗಿದ್ದು, ಇವರು ₹124.5 ಕೋಟಿ ತೆರಿಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಈ ಮೂರು ಪಕ್ಷಗಳ ಪದಾಧಿಕಾರಿಗಳ ಜೊತೆಗೆ, ಕೆಲವು ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಕೂಡ ಆರೋಪಿಗಳೆಂದು ಹೆಸರಿಸಲಾಗಿದೆ. ತೆರಿಗೆ ವಂಚನೆಗೆ ನೆರವಾಗುವ ಮೂಲಕ ಕಮಿಷನ್ ಗಳಿಸುವ ಏಕೈಕ ಉದ್ದೇಶದಿಂದಲೇ ನಾವು ಈ ಪಕ್ಷಗಳನ್ನು ಸ್ಥಾಪಿಸಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪಕ್ಷಗಳು ತೆರಿಗೆದಾರರಿಂದ ದೇಣಿಗೆಯನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಸ್ವೀಕರಿಸುತ್ತಿದ್ದವು. ನಂತರ ನಕಲಿ ಬಿಲ್‌ ಸೃಷ್ಟಿಸಿ, ತಮ್ಮ ಕಮಿಷನ್ ತೆಗೆದುಕೊಂಡು ಉಳಿದ ಹಣವನ್ನು ನಗದು ರೂಪದಲ್ಲಿ ಅವರಿಗೆ ಹಿಂತಿರುಗಿಸುತ್ತಿದ್ದವು. ಈ ಪಕ್ಷಗಳು ಶಾಮೀಲಾಗಿ ಚುನಾವಣಾ ಆಯೋಗಕ್ಕೆ ಸುಳ್ಳು ದೇಣಿಗೆ ವರದಿಗಳನ್ನು ಸಲ್ಲಿಸಿವೆ. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಇರುವುದರಿಂದ, ದೇಣಿಗೆ ನೀಡುವವರು ಟಿಡಿಎಸ್‌ ಒದಗಿಸಿ ತೆರಿಗೆ ವಿನಾಯಿತಿ ಪಡೆಯುತ್ತಿದ್ದರು ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries