ನವದೆಹಲಿ: ತಮಿಳುನಾಡಿಗೆ ನಿತ್ಯ 4 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಮಂಡಳಿಯು ಗುರುವಾರ ಶಿಫಾರಸು ಮಾಡಿದೆ.
ಇಂದು ನಡೆದ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳ ಕಾಲ ನೀರು ಹರಿಸಬೇಕು ಎಂದು ಮಂಡಳಿ ಸೂಚಿಸಿದೆ.
ಪ್ರತಿದಿನ 6 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸೆಪ್ಟೆಂಬರ್ 8ರಂದು ನಿರ್ದೇಶನ ನೀಡಿತ್ತು. ರಾಜ್ಯದ ಬರ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಪ್ರಾಧಿಕಾರ ಈ ನಿರ್ದೇಶನ ನೀಡಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಸಂಬಂಧ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಇದೇ 15ರಂದು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ, 'ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಪ್ರಸ್ತುತ 55 ಟಿಎಂಸಿ ಅಡಿ ನೀರಿದೆ. ಕಳೆದೊಂದು ತಿಂಗಳಲ್ಲಿ ಜಲಾಶಯಗಳಿಗೆ ಒಳಹರಿವು ಪ್ರಮಾಣ ಶೇ 87ರಷ್ಟು ಕಡಿಮೆ ಆಗಿದೆ. ಪ್ರಸ್ತುತ ಒಳಹರಿವು ಪ್ರಮಾಣ ಕೇವಲ 3 ಸಾವಿರ ಕ್ಯುಸೆಕ್‌ಗಳಷ್ಟು ಇದೆ' ಎಂದು ಗಮನ ಸೆಳೆದಿದ್ದರು.

