ಮಧುರೈ : ತಮಿಳುನಾಡಿನ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಪೆರಿಯಾರ್ ರಾಮಸ್ವಾಮಿ ಇತಿಹಾಸದಲ್ಲಿ ಹಲವು ವೈರುಧ್ಯಗಳಿವೆ ಎಂದು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಪೆರಿಯಾರ್ ಅವರು ಮಹಿಳಾ ಸಬಲೀಕರಣ ಹಾಗೂ ಜಾತಿ ಪದ್ಧತಿ ನಿರ್ಮೂಲನೆಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಅಣ್ಣಾಮಲೈ, ನಾಸ್ತಿಕ ನಿಲುವು ಮತ್ತು ಬ್ರಾಹ್ಮಣ ವಿರೋಧಿ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ.
ವೈಗೈ ನದಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರ ಸಭೆಯ ಉದ್ದೇಶಿಸಿ ಮಾತನಾಡಿದ ಅವರು, ಪೆರಿಯಾರ್ ಅವರ ಸಾಮಾಜಿಕ ಸುಧಾರಣೆಗಳು ಮತ್ತು ಮೂಲ ಸಿದ್ಧಾಂತಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
'ಮಹಿಳಾ ಸ್ವಾತಂತ್ರ್ಯದ ಪರ ಅವರು ಧ್ವನಿ ಎತ್ತಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ಜಾತಿ ಪದ್ಧತಿ ನಿರ್ಮೂಲನೆಗೂ ಅವರು ಶ್ರಮಿಸಿದ್ದರು' ಎಂದಿದ್ದಾರೆ.
ಅದೇ ರೀತಿ, ಅವರ ನಾಸ್ತಿಕ ನಿಲುವು ಮತ್ತು ಬ್ರಾಹ್ಮಣ ವಿರೋಧಿ ಸಿದ್ಧಾಂತವನ್ನು ಖಂಡಿತಾ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.
ದ್ರಾವಿಡ ಚಳವಳಿಯ ನಾಯಕನ ಇತಿಹಾಸದಲ್ಲಿ ಹಲವು ವೈರುಧ್ಯಗಳಿವೆ. 1935ರಲ್ಲಿ ಹಿಂದಿ ವಿರೋಧದ ಬಗ್ಗೆ ಅವರು ಮಾತನಾಡಿದ್ದರು. 1965ರಲ್ಲಿ ಹಿಂದಿ ವಿರುದ್ಧ ಪ್ರತಿಭಟಿಸುವವರನ್ನು ಶೂಟ್ ಮಾಡಿ ಎಂದಿದ್ದರು ಎಂಬುದಾಗಿ ಇತಿಹಾಸದಲ್ಲಿ ದಾಖಲಾಗಿದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

