ಇಂಫಾಲ: ಆರು ಜನ ಕುಕಿಗಳನ್ನು ಭದ್ರತಾ ಪಡೆಗಳು ಬಂಧಿಸಿರುವುದನ್ನು ವಿರೋಧಿಸಿ ಕುಕಿ ಸಮುದಾಯದ ಒಂದು ವಿಭಾಗದ ಜನರು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಪ್ರತಿಭಟನೆ ಶನಿವಾರ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿವರೆಗೆ ಮೋಟ್‌ಬಂಗ್ ಮತ್ತು ಸಮೀಪದ ಪ್ರದೇಶಗಳಲ್ಲಿ ಮುಂದುವರಿದಿತ್ತು.
ಈ ವೇಳೆ ಪ್ರತಿಭಟನಕಾರರು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಸರಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾವುದೇ ಕಾರಣ ನೀಡದೆ ಖೋಲೆನ್‌ನ ಆರು ಮಂದಿ ಗ್ರಾಮಸ್ಥರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಜಿಲ್ಲೆಯ ನಾಗಾ ಪ್ರಾಬಲ್ಯದ ಚಾವಂಗ್‌ಕಿನಿಂಗ್ ಗ್ರಾಮದ ಬಳಿ ಇರುವ ಖೋಲೆನ್ ಇತ್ತೀಚೆಗೆ ಸಶಸ್ತ್ರ ದುಷ್ಕರ್ಮಿಗಳ ದಾಳಿಗೆ ಒಳಗಾಗಿತ್ತು.
ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಹಲವು ಸುತ್ತು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದವು. ಭದ್ರತಾ ಪಡೆಗಳ ವಾಹನಗಳ ಸಂಚಾರವನ್ನು ತಡೆಯಲು ಪ್ರತಿಭಟನಕಾರರು ಭಾರಿ ನಿರ್ಮಾಣ ಉಪಕರಣಗಳನ್ನು ಬಳಸಿ ಮೋಟ್‌ಬಂಗ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-2ರ (ಇಂಫಾಲದಿಂದ ದಿಮಾಪುರ) ಕೆಲವು ಭಾಗಗಳನ್ನು ಅಗೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರದರ್ಶನದ ವೇಳೆ ಕೆಲವು ಪ್ರತಿಭಟನಕಾರರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಂಧನಕ್ಕೊಳಗಾಗಿದ್ದ ಗ್ರಾಮದ ಸ್ವಯಂಸೇವಕರನ್ನು ಬಳಿಕ ಭದ್ರತಾ ಪಡೆಗಳು ಬಿಡುಗಡೆ ಮಾಡಿವೆ. ಪ್ರತಿಭಟನೆ ಮುಕ್ತಾಯಗೊಂಡಿದ್ದು, ಈಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

