ಕೈರೊ (AP):ಯೆಮನ್‌ನ ಹೂಥಿ ಬಂಡುಕೋರರು ಕೆಂಪು ಸಮುದ್ರದ ದಕ್ಷಿಣ ಪ್ರವೇಶದ್ವಾರದಲ್ಲಿರುವ ಪ್ರಮುಖ ದ್ವೀಪವನ್ನು ವಶಪಡಿಸಿಕೊಂಡ ಬೆನ್ನಲ್ಲೇ, ಸೌದಿ ಅರೇಬಿಯಾವು ಮುನ್ನೆಚ್ಚರಿಕೆ ಕ್ರಮವಾಗಿ ತೈಲ ಪೂರೈಕೆಯ ಪ್ರಮುಖ ಪೈಪ್‌ಲೈನ್‌ಅನ್ನು ಸ್ಥಗಿತಗೊಳಿಸಿದೆ.
ಹೂಥಿ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಸಂಘರ್ಷದ ಕಾವು ಹೆಚ್ಚಿದೆ.
1980ರ ದಶಕದಲ್ಲಿ ನಿರ್ಮಿಸಲಾದ ಪೂರ್ವ-ಪಶ್ಚಿಮ ಪೈಪ್‌ಲೈನ್, ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಂತರ ಸೌದಿ ಅರೇಬಿಯಾಕ್ಕೆ ಕಚ್ಚಾ ತೈಲ ರಫ್ತಿನ ಪ್ರಮುಖ ಮಾರ್ಗವಾಗಿದೆ.
ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾದ ಬಾಬ್-ಎಲ್-ಮಂದೆಬ್ ಜಲಸಂಧಿ ಮೇಲೆ ಹೂಥಿಗಳು ಹಿಡಿತ ಸಾಧಿಸಿರುವುದು, ಅಮೆರಿಕದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಇರಾನ್‌ಗೆ ಲಭಿಸಿದ ಮುನ್ನಡೆಯಾಗಿದೆ ಎಂದು ಮೂಲಗಳು ವಿಶ್ಲೇಷಿಸಿವೆ.
ಇರಾನ್-ಅಮೆರಿಕ ನಡುವೆ ಸಂಘರ್ಷ ತೀವ್ರಗೊಂಡ ನಂತರ, ಕಚ್ಚಾ ತೈಲವನ್ನು ಮಾರುಕಟ್ಟೆಗೆ ತರಲು ಸೌದಿ ಅರೇಬಿಯಾವು ಹೊರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಕೆಂಪು ಸಮುದ್ರವನ್ನು ಅವಲಂಬಿಸಿದೆ.
ಇರಾನ್ ಗಡಿಗೆ ಹೊಂದಿಕೊಂಡಿರುವ ಇರಾಕ್‌ನ ಮೇಸನ್ ಪ್ರಾಂತ್ಯದಿಂದ ಡ್ರೋನ್ ದಾಳಿ ನಡೆದಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ಹೇಳಿದೆ. ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಇರಾಕ್ ಪ್ರಧಾನಿ ಹಾಗೂ ಅಲ್ಲಿನ ಸೇನಾ ಮುಖ್ಯಸ್ಥರೂ ಆಗಿರುವ ಅಲಿ ಅಲ್-ಜೈದಿ ಹೇಳಿದ್ದಾರೆ.
ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಬಂಡುಕೋರರ ಮೇಲೆ ಸೌದಿ ಅರೇಬಿಯಾ ಮತ್ತು ಅಮೆರಿಕ ಇತ್ತೀಚೆಗೆ ಬಾಂಬ್ ದಾಳಿ ನಡೆಸಿತ್ತು.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಸೌದಿ ಅರೇಬಿಯಾ ಮೇಲೆ ನಡೆದಿರುವ ದಾಳಿಗೆ ಇರಾನ್ ಕಾರಣವಾಗಿರಬಹುದು. ಈ ಬಗ್ಗೆ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದ್ದೇನೆ.

