HEALTH TIPS

ಔಷಧ: ಲಾಭಕ್ಕಾಗಿ 'ಹತ್ಯಾಕಾಂಡ', ಹತ್ತು ಪಟ್ಟು ಹೆಚ್ಚು ದರ ನಿಗದಿ

 ನವದೆಹಲಿ: 'ಇದು ಹತ್ಯಾಕಾಂಡ. ಔಷಧಗಳನ್ನು ಹತ್ತು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ' ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದೆ. 


ಔಷಧಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು, 'ಎಲ್ಲ ಔಷಧಗಳ ಮೇಲೆಯೂ ಲಾಭಾಂಶವನ್ನು ಶೇ 16ಕ್ಕೆ ಏಕರೂಪವಾಗಿ ಮಿತಿಗೊಳಿಸಬಹುದಲ್ಲವೇ' ಎಂದು ಪ್ರಶ್ನಿಸಿದೆ.

'ಔಷಧಗಳ ಮೇಲೆ ಮುದ್ರಿಸುವ ಗರಿಷ್ಠ ಮಾರಾಟ ದರ ಮತ್ತು ಅದರ ನಿಜವಾದ ಖರೀದಿ ವೆಚ್ಚದ ನಡುವೆ ಭಾರಿ ಅಂತರವಿದೆ. ಪಾರದರ್ಶಕತೆಯ ಕೊರತೆ ಮತ್ತು ಗಗನಕ್ಕೇರುತ್ತಲೇ ಇರುವ ಔಷಧಗಳ ಬೆಲೆಯು ಸಾಮಾನ್ಯ ರೋಗಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದರೆ, ಖಾಸಗಿ ಆಸ್ಪತ್ರೆಗಳು ಮತ್ತು ಇತರರು ಲಾಭ ಗಿಟ್ಟಿಸುತ್ತಿದ್ದಾರೆ' ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಮಂಗಳವಾರ ಹೇಳಿದೆ.

'ಔಷಧಗಳ ಮೇಲೆ ಬಿಗಿಯಾದ ಬೆಲೆ ನಿಯಂತ್ರಣವನ್ನು ಹೇರಬೇಕು ಎಂದು ಕಿಶನ್‌ಚಂದ್ ಜೈನ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, 'ಕ್ಯಾನ್ಸರ್‌ಗೆ ನೀಡಲಾಗುವ ಔಷಧವೊಂದು ಚಿಲ್ಲರೆ ವ್ಯಾಪಾರಿಗಳಿಗೆ ₹2,700ಕ್ಕೆ ಸಿಗುತ್ತಿದೆ. ಆದರೆ, ಅದರ ಮೇಲೆ ₹27 ಸಾವಿರ ಬೆಲೆ ಮುದ್ರಿಸಲಾಗಿದೆ. ಈ ಹತ್ತು ಪಟ್ಟು ಹೆಚ್ಚು ಹಣವು ಎಲ್ಲಿ ಹೋಗುತ್ತಿದೆ. ಇದೇ ರೀತಿ ಇಂಜೆಕ್ಷನ್‌ವೊಂದು 3,520ಕ್ಕೆ ವ್ಯಾಪಾರಿಗೆ ದೊರೆಯುತ್ತಿದ್ದರೆ, ₹22,347ಕ್ಕೆ ಮಾರಾಟ ಮಾಡಲಾಗುತ್ತಿದೆ' ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹೇಳಿದರು.

'ಏಕರೂಪ ಲಾಭಾಂಶ ನಿಗದಿ ಸಾಧ್ಯವಿಲ್ಲವೇ?': ಆದ್ಯತೆಯ ಔಷಧಗಳು ಮತ್ತು ಆದ್ಯತೆಯೇತರ ಔಷಧಗಳು ಎಂಬ ವರ್ಗೀಕರಣದ ಮೂಲಕ ಹಲವು ಔಷಧಗಳನ್ನು, ಔಷಧ (ದರ ನಿಯಂತ್ರಣ) ಆದೇಶದಿಂದ (ಡಿಪಿಸಿಒ) ಹೊರಗಿಟ್ಟ ಕ್ರಮಕ್ಕೆ ನ್ಯಾಯಪೀಠವು ಆಕ್ಷೇಪ ವ್ಯಕ್ತಪಡಿಸಿದೆ.

'ಡಿಪಿಸಿಒ ಅಡಿ ಸೂಚಿಸಲಾದಂತೆ ಎಲ್ಲ ಔಷಧಗಳ ಮೇಲೆಯೂ ಗರಿಷ್ಠ ಶೇ 16ರಷ್ಟು ಲಾಭಾಂಶಕ್ಕೆ ಮಿತಿಗೊಳಿಸಲು ಏಕೆ ಸಾಧ್ಯವಿಲ್ಲ? ಸರ್ಕಾರಿ ಯೋಜನೆಗಳಲ್ಲಿ ನೀಡಲಾಗುವ ಚಿಕಿತ್ಸೆಯ ವೆಚ್ಚವನ್ನು ಅಂತಿಮವಾಗಿ ಭರಿಸುವುದು ತೆರಿಗೆದಾರರೇ ಅಲ್ಲವೇ? ಹಾಗಾದರೆ ಎಲ್ಲ ಔಷಧಗಳಿಗೂ ಶೇ 16ರಷ್ಟು ಲಾಭಾಂಶವನ್ನು ಏಕರೂಪವಾಗಿ ನಿಗದಿಪಡಿಸಲು ಏಕೆ ಸಾಧ್ಯವಿಲ್ಲ ಎಂದು ಕೇಳಿತು.

'ಏಕರೂಪವಾಗಿ ಶೇ 16ರ ಲಾಭಾಂಶ ನಿಗದಿಪಡಿಸುವ ನ್ಯಾಯ‍ಪೀಠದ ಸಲಹೆಯು ತಾರ್ಕಿಕ ಎಂದು ತೋರುತ್ತಿದೆ. ಈ ವಿಚಾರದಲ್ಲಿ ಸಮತೋಲಿತ ಪರಿಹಾರಕ್ಕಾಗಿ ಸರ್ಕಾರವು ಪರಿಶೀಲಿಸಲಿದೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, ಸದ್ಯ ಅಸ್ತಿತ್ವದಲ್ಲಿರುವ ನಿಯಂತ್ರಣ ಕಾಯ್ದೆಗಳನ್ನು ಗಮನಕ್ಕೆ ತಂದರು.

ಈ ವಿಚಾರವಾಗಿ ನ್ಯಾಯಪೀಠವು ಸರ್ಕಾರದ ಪ್ರತಿಕ್ರಿಯೆ ಬಯಸಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ನಿಗದಿಪಡಿಸಲಾಯಿತು.

'ಹಗಲು ದರೋಡೆ': ಸೆ.22ರಂದು ಇದೇ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಭಾರಿ ದರ ವ್ಯತ್ಯಾಸವನ್ನು 'ಸುಲಿಗೆ, ವಂಚನೆ ಹಾಗೂ ವ್ಯಾಪಕವಾದ ಹಗಲು ದರೋಡೆ' ಎಂದು ಟೀಕಿಸಿತ್ತು.

ನ್ಯಾಯಪೀಠ ಹೇಳಿದ್ದು

  • ಸಮಾಜದ ದೊಡ್ಡ ಸಮುದಾಯವನ್ನು ಬಾಧಿಸುತ್ತಿರುವ ಸಮಸ್ಯೆ

  • ಲಾಭ ಗಳಿಸುತ್ತಿರುವುದು ಔಷಧ ಕಂಪನಿಗಳಲ್ಲ; ಬದಲಿಗೆ ಖಾಸಗಿ ಆಸ್ಪತ್ರೆಗಳು

  • ಕಾರ್ಪೊರೇಟ್ ಆಸ್ಪತ್ರೆಗಳು ಉದ್ಯಮಗಳಾಗಿವೆ, ಸೇವೆಯಾಗಿ ಉಳಿದಿಲ್ಲ

  • ತೆರಿಗೆದಾರನಿಗೆ ನಿಜವಾಗಿಯೂ ನಷ್ಟವಾಗುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಲಾಭ ಮಾಡಿಕೊಳ್ಳುತ್ತಿವೆ

ನ್ಯಾಯಪೀಠವೈದ್ಯಕೀಯ ಸಾಧನಗಳು ಮತ್ತು ಔಷಧಗಳು ಅಗತ್ಯ ಸರಕುಗಳ ಕಾಯ್ದೆ ಅಡಿ ಬರುತ್ತವೆ. ಅಂಥದ್ದರಲ್ಲಿ ಅವುಗಳನ್ನು ದರ ನಿಯಂತ್ರಣ ಕಾನೂನಿನಿಂದ ಹೊರಗಿಡುವುದು ಏಕೆ? 'ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ ಔಷಧಗಳನ್ನು ತಮ್ಮ ಅಂಗಡಿಗಳಿಂದಲೇ ಖರೀದಿಸುವಂತೆ ರೋಗಿಗಳಿಗೆ ಒತ್ತಾಯಿಸಲಾಗುತ್ತದೆ. ಇದೇ ಔಷಧವನ್ನು ಹೊರಗೆ ಕಡಿಮೆ ಬೆಲೆಗೆ ಖರೀದಿಸಲು ಮುಂದಾದರೆ ಅದರ ನೈಜತೆ ಬಗ್ಗೆ ಅನುಮಾನ ಮೂಡಿಸಲಾಗುತ್ತದೆ ಅಥವಾ ಆಸ್ಪತ್ರೆಗಳಿಂದಲೇ ಪ್ರತಿರೋಧ ಎದುರಾಗುತ್ತದೆ' ಎಂಬ ಅಂಶವನ್ನೂ ಪೀಠವು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿತು. 'ಔಷಧಗಳನ್ನು ಹೊರಗಡೆಯಿಂದ ತಂದರೆ ಚಿಕಿತ್ಸೆಯ ಬಗ್ಗೆ ಖಾತರಿಯನ್ನೇ ಕೊಡುವುದಿಲ್ಲ ಎಂದು ಕಾರ್ಪೊರೇಟ್ ಆಸ್ಪತ್ರೆಗಳು ಹೇಳುತ್ತವೆ. ಹೀಗಾದರೆ ರೋಗಿಗಳ ಪಾಡೇನು? ಮೃತದೇಹವನ್ನು ಆಸ್ಪತ್ರೆಯಿಂದ ಹೊರಗಡೆ ತೆಗೆದುಕೊಂಡು ಹೋಗಲು ಸಹ ಬಿಡುವುದಿಲ್ಲ. ಇದರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು' ಎಂದು ನ್ಯಾಯಮೂರ್ತಿ ಮೆಹ್ತಾ ಅವರು ಹೇಳಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries