ಬ್ರಸ್ಸೆಲ್ಸ್ (AP): ಕೆಂಪು ಸಮುದ್ರದಲ್ಲಿ ಇಂಧನ ರಫ್ತಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಬಹುರಾಷ್ಟ್ರೀಯ ಕಡಲ ರಕ್ಷಣಾ ಒಕ್ಕೂಟದಲ್ಲಿ ವೀಕ್ಷಕ ಸ್ಥಾನಕ್ಕಾಗಿ ಐರೋಪ್ಯ ಒಕ್ಕೂಟ (ಇ.ಯು) ಬೇಡಿಕೆ ಸಲ್ಲಿಸಲಿದೆ ಎಂದು ಐರೋಪ್ಯ ಆಯೋಗದ ಉಪಾಧ್ಯಕ್ಷೆ ಕಾಜಾ ಕಲ್ಲಾಸ್ ಸೋಮವಾರ ತಿಳಿಸಿದ್ದಾರೆ.
ಇಲ್ಲಿ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರುಗಳ ಸಭೆಗೂ ಮುನ್ನ ಮಾತನಾಡಿದ ಅವರು, 'ಒಕ್ಕೂಟದ್ದೇ ಆದ ಸಣ್ಣ ನೌಕಾ ಪಡೆಯ ನಿಯೋಜನೆಗೆ ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಗುವುದು' ಎಂದರು.
ಬಾಬ್ ಅಲ್ ಮಂಡೆಬ್ ಜಲಸಂಧಿಯಲ್ಲಿ ಹೂಥಿ ಬಂಡುಕೋರರ ದಾಳಿಯಿಂದ ಸರಕು ಸಾಗಣೆ ಹಡಗುಗಳಿಗೆ ರಕ್ಷಣೆ ನೀಡಲು 'ಆಸ್ಪೈಡ್ಸ್'ನ ತುಕಡಿಯನ್ನು ವಿಸ್ತರಿಸಲು ಕೋರುವುದಾಗಿ ತಿಳಿಸಿದ ಅವರು, 'ಈಗಾಗಲೇ ಆರು ಹಡಗುಗಳನ್ನು ನಿಯೋಜಿಸಲಾಗಿದೆ. ಆದರೆ ಈಗ ಅದಕ್ಕಿಂತಲೂ ಹೆಚ್ಚಿನ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.
ಇರಾನ್ ಯುದ್ಧದ ಕಾರಣದಿಂದ ಇಂಧನ ದಾಹ ಎದುರಿಸುತ್ತಿರುವ ಐರೋಪ್ಯ ಒಕ್ಕೂಟವು, ದಾಖಲೆ ಮಟ್ಟದ ಬೆಲೆ ಏರಿಕೆ ಬಿಸಿಯನ್ನು ಎದುರಿಸುತ್ತಿದೆ.

