ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ 'ಭಾರತ ಮಂಟಪ'ದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು 18ನೇ 'ಬ್ರಿಕ್ಸ್' ಶೃಂಗಸಭೆ ನಡೆಯಲಿದೆ. ಜಾಗತಿಕ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ.
ಜಾಗತಿಕ ಕಲ್ಯಾಣವನ್ನು ಗುರಿಯಾಗಿಸಿಕೊಂಡು ಬ್ರಿಕ್ಸ್ ಶೃಂಗಸಭೆಯಲ್ಲಿ ಸಕಾರಾತ್ಮಕ ಮತ್ತು ಅರ್ಥಪೂರ್ಣ ಮಾತುಕತೆಗಳು ನಡೆಯಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಮುಂದಿನ ದಿನಗಳಲ್ಲಿ ಜಾಗತಿಕ ನಾಯಕರು ಬ್ರಿಕ್ಸ್ ಶೃಂಗಸಭೆಗಾಗಿ ಒಂದಾಗಲಿದ್ದಾರೆ. ಈ ಸಮ್ಮೇಳನವು ಜಾಗತಿಕ ಕಲ್ಯಾಣದ ಆಶಯದೊಂದಿಗೆ ವಿವಿಧ ವಿಷಯಗಳ ಕುರಿತು ಸಕಾರಾತ್ಮಕ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ' ಎಂದು ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ರಿಕ್ಸ್ ಶೃಂಗಸಭೆ-2026
18ನೇ ಬ್ರಿಕ್ಸ್ ಶೃಂಗಸಭೆಯನ್ನು 'ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯ ನಿರ್ಮಾಣ' ಎಂಬ ಧ್ಯೇಯವಾಕ್ಯದಡಿ ಆಯೋಜಿಸಲಾಗಿದೆ. ಸಭೆಯಲ್ಲಿ ಆಹಾರ, ಇಂಧನ, ಆರೋಗ್ಯ, ಪೂರೈಕೆ ಸರಪಳಿಗಳಲ್ಲಿ ಸಾಮೂಹಿಕ ನಾಯಕತ್ವವನ್ನು ಹೆಚ್ಚಿಸುವುದರ ಮೇಲೆ ಗಮನ ಹರಿಸುವ ನಿರೀಕ್ಷೆಯಿದೆ.
ಪಶ್ಚಿಮ ಏಷ್ಯಾ ಸಂಘರ್ಷ, ಹೊರ್ಮುಜ್ ಜಲಸಂಧಿ ಬಿಕ್ಕಟ್ಟು, ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದ ಉಂಟಾಗಿರುವ ಆರ್ಥಿಕ ಅಸ್ಥಿರತೆ ಮತ್ತು ಜಾಗತಿಕ ಸವಾಲುಗಳ ಕುರಿತ ಚರ್ಚೆಗೆ ಈ ಬಾರಿಯ ಸಮ್ಮೇಳನ ನಿರ್ಣಾಯಕ ವೇದಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಬಿಗಿ ಭದ್ರತೆ
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಇಂಡೊನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ, ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ, ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿ 'ಬ್ರಿಕ್ಸ್' ಒಕ್ಕೂಟದ 11 ಸದಸ್ಯ ರಾಷ್ಟ್ರಗಳ ಹಲವು ನಾಯಕರು ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ತಾತ್ಕಾಲಿಕ ಸಂಚಾರ ನಿರ್ಬಂಧಗಳೊಂದಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ದೆಹಲಿಗೆ ಆಗಮಿಸಿದ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮೂರು ದಿನಗಳ ಭಾರತ ಪ್ರವಾಸದ ಭಾಗವಾಗಿ ಶುಕ್ರವಾರ ದೆಹಲಿಗೆ ಬಂದಿಳಿದಿದ್ದಾರೆ. ಪುಟಿನ್ ಅವರೊಂದಿಗೆ ಉನ್ನತ ಮಟ್ಟದ ನಿಯೋಗವೂ ಬಂದಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿರುವ ಪುಟಿನ್, ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ರಕ್ಷಣೆ ಮತ್ತು ಇಂಧನ ಸಹಕಾರವನ್ನು ವಿಸ್ತರಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ.
ಸೆ.12ರಂದು (ಶನಿವಾರ) ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲೂ ಪುಟಿನ್ ಭಾಗವಹಿಸಲಿದ್ದಾರೆ.

