ಮುಳ್ಳೇರಿಯ: ಮುಳಿಯಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳ ನಂತರ ಚಿರತೆ ಭೀತಿ ಮತ್ತೆ ಜನರನ್ನು ಕಾಡಲಾರಂಭಿಸಿದೆ. ಮುಳಿಯಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಕೂಟರಲ್ಲಿ ತೆರಳುತ್ತಿದ್ದವರ ಎದುರು ಚಿರತೆ ಪ್ರತ್ಯಕ್ಷಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ರಾತ್ರಿ 7.30ರ ಸುಮಾರಿಗೆ ತೀಯಡ್ಕ-ಕುಟ್ಯಾನಂ ರಸ್ತೆಯಲ್ಲಿ ಚಿರತೆ ಕಂಡುಬಂದಿದೆ. ಆಸ್ಪತ್ರೆಯಿಂದ ಸ್ಕೂಟರ್‍ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ನಾಯಿಯನ್ನು ಕಚ್ಚಿಕೊಂಡಿದ್ದ ಚಿರತೆ ಸ್ಕೂಟರ್‍ನ ಮುಂದಿನಿಂದ ಅತಿವೇಗವಾಗಿ ಹಾದುಹೋಗಿದ್ದು, ತಕ್ಷಣ ಸ್ಕೂಟರ್ ನಿಲುಗಡೆಗೊಳಿಸಿರುವುದರಿಂದ ಅಪಾಯ ತಪ್ಪಿರುವುದಾಗಿ ಸವಾರ ಶಿವಪ್ರಿಯ ತಿಳಿಸಿದ್ದಾರೆ. ಇದಾದ ನಂತರ ಕುಞÂಪ್ಪಾರ ಎಂಬಲ್ಲಿ ಮನೆ ಅಂಗಳದಲ್ಲಿದ್ದ ಸಾಕು ನಾಯಿಯನ್ನು ಚಿರತೆ ಎಳೆದೊಯ್ದಿರುವುದಾಗಿಯೂ ಸ್ಥಳೀಯರು ತಿಳಿಸಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದ್ದಾರೆ.

