ಎವೆರೆಸ್ಟ್ ಶಿಖರ ಏರಬೇಕೆನ್ನುವುದು ಅನೇಕರ ಆಸೆ. ಪ್ರವಾಸಿಗರು ಮತ್ತು ಪರ್ವತಾರೋಹಿಗಳಿಗಂತೂ ಎವರೆಸ್ಟ್ ಕನಸಿನ ತಾಣ ಎಂದೇ ಹೇಳಬಹುದು. ಜೀವನದಲ್ಲಿ ಒಮ್ಮೆಯಾದರೂ ಎವರೆಸ್ಟ್ ಏರಬೇಕು, ಅಲ್ಲಿ ಸಮಯ ಕಳೆಯಬೇಕು ಎಂದು ಅನೇಕರು ಎಣಿಸುತ್ತಾರೆ. ಅದೇ ರೀತಿ ಸಾವಿರಾರು ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ.
ಈ ಪ್ರವಾಸಿಗರ ಕಾರಣದಿಂದಲೇ ಹಿಮ ಕರಗುವಿಕೆ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ದೃಢಪಡಿಸಿದೆ.
ಈ ಅಧ್ಯಯನವನ್ನು ನೇಪಾಳದ ಭೂ ನಿರ್ವಹಣಾ ಇಲಾಖೆಯ ತಜ್ಞರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. 2023ರ ಪರ್ವತಾರೋಹಣದ ಸಮಯದಲ್ಲಿ ಸಂಗ್ರಹಿಸಿದ ದತ್ತಾಂಶ ಆಧರಿಸಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.
ಹೌದು, Regional Environmental Change ಎನ್ನುವ ಜರ್ನಲ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಎವರೆಸ್ಟ್‌ನಲ್ಲಿ ಮಾನವನ ಸಂಚಾರದಿಂದ ಟನ್‌ಗಟ್ಟಲೆ ಹಿಮ ಕರುಗುತ್ತಿದೆ. ಮುಖ್ಯ ಕಾರಣ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಉಳಿದುಕೊಳ್ಳುವ ಪ್ರವಾಸಿಗರು. ಪ್ರವಾಸಿಗರಿಂದ ನಿತ್ಯ ಕನಿಷ್ಠ 6 ಸಾವಿರ ಲೀಟರ್ ಮೂತ್ರ ಎವರೆಸ್ಟ್‌ನಲ್ಲಿ ಸಂಗ್ರಹವಾಗುತ್ತಿದೆ. ಮೂತ್ರದಲ್ಲಿರುವ ಶಾಖ ಮತ್ತು ಲವಣಾಂಶವು ಖುಂಬು ಹಿಮನದಿಯ ಮೇಲಿನ ಹಿಮವನ್ನು ಕರಗಿಸುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ಹಿಮ ಕರಗಲು ಮುಖ್ಯ ಕಾರಣಗಳೆಂದರೆ, ಪಳಯುಳಿಕೆ ಇಂಧನಗಳ ಬಳಕೆ, ಮಾನವನ ಮೂತ್ರ, ಹವಾಮಾನ ಬದಲಾವಣೆ ಎನ್ನಲಾಗಿದೆ.
ಪಳಯುಳಿಕೆ ಇಂಧನಗಳ ಬಳಕೆ
ಎವರೆಸ್ಟ್ ಏರುವಾಗ ಅಡುಗೆ ಮಾಡಲು ಮತ್ತು ಚಳಿಯಿಂದ ಪಾರಾಗಲು ಪೆಟ್ರೋಲ್, ಗ್ಯಾಸ್ ಮತ್ತು ಸೀಮೆಎಣ್ಣೆಯನ್ನು ಕೊಂಡೊಯ್ಯುತ್ತಾರೆ. ಇದನ್ನು ಬಳಸಿದಾಗ ಶಾಖದಿಂದ ಮಂಜುಗಡ್ಡೆ ಕರಗಲು ಕಾರಣವಾಗುತ್ತದೆ. ಅನೇಕರು ಡೇರೆಗಳಲ್ಲಿ ಉಳಿದುಕೊಳ್ಳುತ್ತಾರೆ. ಇಲ್ಲಿ ಚಳಿ ತಡೆಯಲು ಎಲ್‌ಪಿಜಿಯನ್ನು ಬಳಸುತ್ತಾರೆ. ಅಧ್ಯಯನದ ವರದಿ ಪ್ರಕಾರ, 2023ರಲ್ಲಿ ಎವರೆಸ್ಟ್‌ನಲ್ಲಿ 50 ದಿನ, 1,600 ಡೇರೆಗಳನ್ನು ನಿರ್ಮಿಸಲಾಗಿತ್ತು. ಇವುಗಳಲ್ಲಿ ಪ್ರವಾಸಿಗರು 824 ಎಲ್‌ಪಿಜಿ ಸಿಲಿಂಡರ್, 19,935 ಲೀಟರ್ ಸೀಮೆಎಣ್ಣೆ ಮತ್ತು 5,130 ಲಿಟರ್ ಪೆಟ್ರೋಲ್ ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಮಾನವನ ಮೂತ್ರ
ಸಾಮಾನ್ಯವಾಗಿ ಎತ್ತರ ಪ್ರದೇಶಕ್ಕೆ ಹೋದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ನೀರು ಕುಡಿಯುವುದು ಅಗತ್ಯವಾಗಿರುತ್ತದೆ. ಹೀಗಿದ್ದಾಗ ಹೆಚ್ಚು ಮೂತ್ರ ವಿಸರ್ಜನೆ ಸಹಜ. ಇದರಿಂದಾಗಿ ನಿತ್ಯ ಸುಮಾರು 6 ಸಾವಿರ ಲೀಟರ್ ಮೂತ್ರ ಎವರೆಸ್ಟ್‌ನಲ್ಲಿ ಹರಿಯುತ್ತದೆ. ಮಲ ಅಥವಾ ಇತರ ತ್ಯಾಜ್ಯಗಳನ್ನು ಪೆಟ್ಟಿಗೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಮೂತ್ರ ಮಾತ್ರ ನೇರವಾಗಿ ಹಿಮವನ್ನು ಸೇರುತ್ತದೆ. ಇದರಿಂದ ಪ್ರತಿ ಋತುವಿನಲ್ಲಿ 154 ಟನ್ ಮಂಜುಗಡ್ಡೆ ಕರಗುತ್ತಿದೆ ಎನ್ನುವುದನ್ನು ಅಧ್ಯಯನ ಬಹಿರಂಗಪಡಿಸಿದೆ.
ಹವಾಮಾನ ಬದಲಾವಣೆ
ಹವಾಮಾನ ಬದಲಾವಣೆ ಕೂಡ ಹಿಮನದಿ ಕರಗಲು ಪ್ರಮುಖ ಕಾರಣ. ಮಾನವನ ಹಸ್ತಕ್ಷೇಪವೂ ಅದಕ್ಕೆ ಕಾರಣವಾಗುತ್ತದೆ. ಹೀಗಾಗಿ ನೇರವಾಗಿ ಹಿಮನದಿ ಕರಗುವಂತೆ ಮಾಡುತ್ತದೆ. ಅಂಕಿ ಅಂಶಗಳ ಪ್ರಕಾರ, ಪ್ರತಿ ವರ್ಷ ಎವರೆಸ್ಟ್ ಏರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಪ್ರವಾಸೋದ್ಯಮದ ದೃಷ್ಟಿಯಿಂದ ಇದನ್ನು ಒಂದೇ ಸಲಕ್ಕೆ ತಡೆಯಲು ಸಾಧ್ಯವಿಲ್ಲ ಎನ್ನುತ್ತದೆ ಅಧ್ಯಯನ.

