ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತನ್ನ ಪದವಿ ಪ್ರಮಾಣಪತ್ರಗಳನ್ನು ಬಹಿರಂಗಪಡಿಸಿದರೆ, ನಾನು ಕೂಡ ನನ್ನ ಅಮೆರಿಕ ಶಿಕ್ಷಣದ ಪ್ರಮಾಣಪತ್ರಗಳನ್ನು ತೋರಿಸುವುದಾಗಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ಹೇಳಿದ್ದಾರೆ.
ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ತಾನು ಕಲಿತಿರುವ ಬಗ್ಗೆ ಹೊಸ ವಿವಾದವೊಂದು ಸೃಷ್ಟಿಯಾದ ಬೆನ್ನಲ್ಲೇ, ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಎಕ್ಸ್‌ನಲ್ಲಿ ಸಂದೇಶವೊಂದನ್ನು ಹಾಕಿದ ದೀಪ್ಕೆ, ''ನಾವಿಬ್ಬರೂ ನಮ್ಮ ಪದವಿಗಳನ್ನು ತೋರಿಸೋಣ'' ಎಂದು ಕರೆ ನೀಡಿದ್ದಾರೆ.
''ನನ್ನ ಪದವಿಯನ್ನು ನೋಡಲು ಕಾಯುತ್ತಿರುವ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರಧಾನಿಯವರ ಪದವಿಯನ್ನು ನೋಡದೆಯೇ ಅವರು 12 ವರ್ಷಗಳನ್ನು ಹೇಗೆ ಕಳೆದರು ಎನ್ನುವುದು ಆಶ್ಚರ್ಯದ ವಿಷಯವಾಗಿದೆ'' ಎಂದು ಸಿಜೆಪಿ ನಾಯಕ ಹೇಳಿದ್ದಾರೆ.
ಬಳಿಕ, ತನ್ನ ಶೈಕ್ಷಣಿಕ ಪ್ರಮಾಣಪತ್ರಗಳನ್ನು ತೋರಿಸುವಂತೆ ಪ್ರಧಾನಿ ಮೋದಿ ಅವರಿಗೆ ಕರೆ ನೀಡಿದ ದೀಪ್ಕೆ, ''ನಾವಿಬ್ಬರೂ ನಮ್ಮ ಪದವಿಗಳನ್ನು ತೋರಿಸಿ ಇದಕ್ಕೊಂದು ಅಂತ್ಯ ಹಾಡೋಣ'' ಎಂದಿದ್ದಾರೆ.
ಇತ್ತೀಚೆಗೆ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರೊಂದಿಗೆ ಪಾಡ್‌ಕಾಸ್ಟ್ ನಡೆಸುತ್ತಿದ್ದ ವೇಳೆ ನಿರೂಪಕ ಪ್ರಖರ್ ಗುಪ್ತಾ, ದೀಪ್ಕೆ ಅಮೆರಿಕ ವಿಶ್ವವಿದ್ಯಾಲಯದಲ್ಲಿ ಪಡೆದ ಶಿಕ್ಷಣದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ನಂತರ ಈ ಬೆಳವಣಿಗೆಗಳು ನಡೆದಿವೆ.
ಇನ್ನೊಂದು ಸಂದೇಶದಲ್ಲಿ, ಪ್ರಧಾನಿ ವಿರುದ್ಧದ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದ ದೀಪ್ಕೆ, ''ದಿಲ್ಲಿ ಹೈಕೋರ್ಟ್ ಪ್ರಧಾನಿಯವರ ಪದವಿಯನ್ನು ಬಹಿರಂಗಪಡಿಸಲು ಏಕೆ ನಿರಾಕರಿಸಿತು? ತಮ್ಮ ಪದವಿಯನ್ನು ತೋರಿಸದ ಪ್ರತಿಯೊಬ್ಬರೂ ವಂಚಕರು ಮತ್ತು ಸುಳ್ಳುಗಾರರಾಗಿದ್ದಾರೆ ಎನ್ನುವುದನ್ನು ಕಳೆದ ಕೆಲವು ದಿನಗಳಿಂದ ನಾನು ಐಟಿ ಸೆಲ್‌ನಿಂದ ಕಲಿತುಕೊಂಡಿದ್ದೇನೆ'' ಎಂದು ಹೇಳಿದ್ದಾರೆ.

