ನವದೆಹಲಿ: 150ಕ್ಕೂ ಅಧಿಕ ಪ್ರಯಾಣಿಕರಿದ್ದ, ದೋಹಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ಮಸ್ಕತ್ಗೆ ಪಥ ಬದಲಾಯಿಸಲಾಯಿತು.
ಏರ್ ಬಸ್ ಎ 321 ನಿಯೋ ವಿಮಾನವಾದ ವಿಮಾನ 6ಇ 1302 ನಿಗದಿತ ಸಮಯಕ್ಕಿಂತ ಸುಮಾರು ಒಂದು ಗಂಟೆ ತಡವಾಗಿ ಸ್ಥಳೀಯ ಸಮಯ ನಿನ್ನೆ ಬೆಳಗ್ಗೆ 3.03ಕ್ಕೆ (ಭಾರತೀಯ ಸಮಯ ಬೆಳಗ್ಗೆ 5.03) ಸಂಚಾರ ಆರಂಭಿಸಿತ್ತು.
ನಿನ್ನೆ ಬೆಳಗ್ಗೆ 5.36ಕ್ಕೆ (ಭಾರತೀಯ ಸಮಯ ಬೆಳಗ್ಗೆ 7.06) ಮಸ್ಕತ್ನಲ್ಲಿ ಭೂಸ್ಪರ್ಶ ಮಾಡಿತು ಎಂದು ವಿಮಾನಗಳ ಹಾರಾಟಗಳ ಬಗ್ಗೆ ನಿಗಾ ಇರಿಸುವ ಜಾಲ ತಾಣ 'ಫ್ಲೈಟ್ಅವೇರ್' ತಿಳಿಸಿದೆ.
ತನ್ನ ಹೇಳಿಕೆಯಲ್ಲಿ ಇಂಡಿಗೋ, ''ಸೆಪ್ಟಂಬರ್ 3ರಂದು ದೋಹಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ 6ಇ 1302 ಅನ್ನು ಪೈಲಟ್ ಓರ್ವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದುದರಿಂದ ಮಸ್ಕತ್ಗೆ ಪಥ ಬದಲಾಯಿಸಲಾಯಿತು. ವಿಮಾನ ಭೂಸ್ಪರ್ಶ ಮಾಡಿದ ಕೂಡಲೇ ಅವರಿಗೆ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದ್ದು, ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ'' ಎಂದಿದೆ.

