ಕಠ್ಮಂಡು: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಗುರುತು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಮತ್ತು ಕುಟುಂಬಸ್ಥರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಕಾಣೆಯಾದವರನ್ನು ಹುಡುಕಲು ಮತ್ತು ಮೃತರ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆಯೇ ಕುಟುಂಬಸ್ಥರಿಗೆ ಏಕೈಕ ಆಸರೆಯಾಗಿದೆ.
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಬೋಟಿ ಕೋಶಿ, ತ್ರಿಶೂಲಿ ನದಿ ದಡದಲ್ಲಿರುವ ಗ್ರಾಮಗಳು ಕೊಚ್ಚಿಕೊಂಡು ಹೋಗಿದೆ. ಇದುವರೆಗೆ 1,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಲ್ಲದೆ, ಸುಮಾರು 5 ಸಾವಿರ ಜನರು ನಾಪತ್ತೆಯಾಗಿದ್ದಾರೆ.
ಗುರುತು ಪತ್ತೆಗೆ ಎದುರಾಗಿರುವ ಸವಾಲುಗಳು
ನೀರಿನಲ್ಲಿ ಕೊಚ್ಚಿಹೋದ ಶವಗಳು ಕೊಳೆತುಹೋಗಿವೆ. ಮುಖ ಅಥವಾ ಬಟ್ಟೆಗಳ ಮೂಲಕ ಗುರುತಿಸುವುದು ಅಸಾಧ್ಯವಾಗಿರುವುದರಿಂದ, ಪೊಲೀಸರು ವಿಧಿವಿಜ್ಞಾನ ತಜ್ಞರ ಸಹಾಯದಿಂದ ಡಿಎನ್‌ಎ ಪರೀಕ್ಷೆಯನ್ನು ನಂಬಿಕೊಂಡಿದ್ದಾರೆ.
ಇದುವರೆಗೆ ಪೊಲೀಸರು 2,272 ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ (1,260 ಶವಗಳಿಂದ ಮತ್ತು 1,012 ಸಂಬಂಧಿಕರಿಂದ).
ಸೂಕ್ತ ಗುರುತಿಸುವಿಕೆಯ ಬಳಿಕ 1,030 ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.
ಕೇವಲ 96 ಶವಗಳನ್ನು ಮಾತ್ರ ಗುರುತಿಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಕುಟುಂಬದ ಕಣ್ಣೀರಿನ ಕಥೆ
ಅಮೃತ್ ದಿಯಾಲಿ ಎಂಬವರ ತಮ್ಮ ರಾಜ್ ಕುಮಾರ್, ಪತ್ನಿ ಮತ್ತು 4 ವರ್ಷದ ಮಗು ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ. ಐದು ದಿನಗಳ ಹುಡುಕಾಟದ ಬಳಿಕ ನದಿಯ ದಡದಲ್ಲಿ ಸಿಕ್ಕ ಕತ್ತರಿಸಿದ ಕೈ ತನ್ನ ತಮ್ಮನದ್ದೇ ಇರಬಹುದು ಎಂಬ ಅನುಮಾನದಿಂದ ಅವರ ಕುಟುಂಬಸ್ಥರು ಡಿಎನ್‌ಎ ಪರೀಕ್ಷೆಗೆ ಮಾದರಿ ಕಳುಹಿಸಿದ್ದಾರೆ. ʼನಾವು ಇನ್ನುಳಿದ ಯಾವ ಆಸೆಯನ್ನೂ ಬಿಟ್ಟಿದ್ದೇವೆ, ಕನಿಷ್ಠ ಕೈಯಾದರೂ ನನ್ನ ತಮ್ಮನದೇ ಎಂದು ತಿಳಿಯಲಿʼ ಎಂದು ಅಮೃತ್ ಅಳಲು ತೋಡಿಕೊಂಡಿದ್ದಾರೆ.
ಸಂಬಂಧಿಕರಿಗೆ ನೆರವಾಗಲು ಸರ್ಕಾರದ ಹೆಜ್ಜೆ
ಕುಟುಂಬಸ್ಥರು ಡಿಎನ್‌ಎ ಮಾದರಿಗಳನ್ನು ನೀಡಲು ಕಠ್ಮಂಡುವಿಗೇ ಅಲೆಯುವುದನ್ನು ತಪ್ಪಿಸಲು ನೇಪಾಳ ಪೊಲೀಸರು ನುವಾಕೋಟ್‌ನ ಬಿದುರ್‌ನಲ್ಲಿ ಹೊಸ ಕೇಂದ್ರವನ್ನು ತೆರೆದಿದ್ದಾರೆ. ಅಲ್ಲದೆ, ಅಪರಿಚಿತ ಶವಗಳ ವಿವರಗಳನ್ನು ನೇಪಾಳ ಪೊಲೀಸ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

