ಕಪುರ್ತಲಾ: ತಮ್ಮ ಪುತ್ರ ಮೃತಪಟ್ಟಿದ್ದಾನೆಂದು ಭಾವಿಸಿ ಅನಾಥ ಮೃತದೇಹವೊಂದರ ಅಂತ್ಯಕ್ರಿಯೆ ನಡೆಸಿದ್ದ ಕುಟುಂಬಕ್ಕೆ ಅದಾದ 15 ದಿನಗಳ ಬಳಿಕ, "ನಿಮ್ಮ ಪುತ್ರ ಜೀವಂತವಾಗಿದ್ದಾನೆ" ಎಂಬ ದೂರವಾಣಿ ಕರೆಯೊಂದು ಬಂದಿರುವ ಘಟನೆ ಪಂಜಾಬ್ ನ ಕಪುರ್ತಲಾದಲ್ಲಿ ನಡೆದಿದೆ.
ಆಗಸ್ಟ್ 5ರಂದು ಮನೆಯಿಂದ ಹೊರಗೆ ತೆರಳಿದ್ದ ರವಿಕುಮಾರ್ ಎಂಬ ಯುವಕ ಮತ್ತೆ ಮನೆಗೆ ಮರಳಿರಲಿಲ್ಲ. ಆತನ ತಂದೆ ಹಾಗೂ ಸಹೋದರ ಆತನಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದರೂ, ಆತನನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಕೊನೆಗೆ ಆಗಸ್ಟ್ 11ರಂದು ಕಪುರ್ತಲಾ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ನಡುವೆ, ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ ಎಂದು ಕುಟುಂಬದ ಸದಸ್ಯರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಯುವಕನ ಭಾವಚಿತ್ರಗಳನ್ನೂ ಅವರಿಗೆ ತೋರಿಸಿದ್ದಾರೆ. ಆ ಮೃತದೇಹ ರವಿಕುಮಾರ್ ನದ್ದು ಎಂದು ಕುಟುಂಬದ ಸದಸ್ಯರು ಹಾಗೂ ಇನ್ನಿತರರು ಗುರುತಿಸಿದ್ದಾರೆ.
ನಮ್ಮ ಪುತ್ರ ಮೃತಪಟ್ಟಿದ್ದಾನೆ ಎಂದು ಭಾವಿಸಿದ ಕುಟುಂಬದ ಸದಸ್ಯರು, ಆಗಸ್ಟ್ 13ರಂದು ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದರೆ, ಸೆಪ್ಟೆಂಬರ್ 2ರಂದು ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ರವಿಕುಮಾರ್ ಕುಟುಂಬದ ಸದಸ್ಯರಿಗೆ ಕರೆ ಮಾಡಿರುವ ಕಪುರ್ತಲಾ ಕೇಂದ್ರ ಕಾರಾಗೃಹದ ಉದ್ಯೋಗಿಯೊಬ್ಬರು, ರವಿಕುಮಾರ್ ಎಂಬ ಹೆಸರಿನ ವ್ಯಕ್ತಿಯನ್ನು ಜೈಲಿನಲ್ಲಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಬೀದಿಯಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೆ ಜಲಂಧರ್ ಪೊಲೀಸರಿಂದ ಬಂಧಿತನಾಗಿದ್ದ ರವಿಕುಮಾರ್ ನನ್ನು ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.
ಈ ಮಾಹಿತಿಯಿಂದ ಕುಟುಂಬದ ಸದಸ್ಯರು ಗೊಂದಲಕ್ಕೀಡಾಗಿದ್ದಾರೆ. ಮರುದಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿರುವ ಕುಟುಂಬದ ಸದಸ್ಯರು ರವಿಕುಮಾರ್ ಜೀವಂತವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.

