ಲಖನೌ: ಆರ್ಯ ಸಮಾಜ ದೇವಾಲಯದಿಂದ ನೀಡುವ ಮದುವೆ ನೋಂದಣಿ ಪತ್ರವೊಂದನ್ನೇ ಆಧರಿಸಿ ಶಾಸ್ತ್ರ ಸಮ್ಮತವಾಗಿ ಮಾನ್ಯಗೊಂಡ ಹಿಂದೂ ಮದುವೆ ನಡೆದಿದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ಹೇಳಿದೆ.
ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಅಧಿಕಾರಿ ರೋಹಿತ್ ಪಾಂಡೆ ಎಂಬವರು ತಮ್ಮನ್ನು ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾಗಿದ್ದು, ನಂತರ ಬೇರೊಬ್ಬರನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿ ಸುಚೇತಾ ತಿವಾರಿ ಎಂಬವರು ದೂರು ನೀಡಿದ್ದರು.
ಆ ದೂರನ್ನು ಆಧರಿಸಿ, ರೋಹಿತ್ ಅವರು ಸೇವೆಗೆ ಸೇರುವ ಸಂದರ್ಭದಲ್ಲಿ ತಮ್ಮ ವೈವಾಹಿಕ ಜೀವನದ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಪರಿಗಣಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಇದೀಗ ಸೇವೆಯಿಂದ ತಮ್ಮನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ರೋಹಿತ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾ. ರಾಜೀವ್ ಸಿಂಗ್ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಮಾನ್ಯಗೊಂಡ ಹಿಂದೂ ಮದುವೆಗೆ ಆರ್ಯ ಸಮಾಜದ ನೋಂದಣಿ ಪತ್ರವೊಂದಲೇ ದಾಖಲೆ ಆಗುವುದಿಲ್ಲ ಎಂದಿದೆ.
ಜತೆಗೆ ಹಿಂದೂ ಮದುವೆ ಕಾಯ್ದೆ ಪ್ರಕಾರ, ಸಪ್ತಪದಿ ತುಳಿದರೆ ಮಾತ್ರ ಅದು ಮಾನ್ಯಗೊಂಡ ಹಿಂದೂ ಮದುವೆಯಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

