ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್-ಝೀಗಳ ಬಲದೊಂದಿಗೆ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಬ್ಭಾಗವಾಗಿದೆ.
ಸಿಜೆಪಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮನೀಶ್ ಬ್ರಹ್ಮಭಟ್ ಅವರು ಮೂಲ ಸಂಘಟನೆಯಿಂದ ಹೊರಬಂದು ಕಾಕ್ರೋಚ್ ಜನತಾ ಪಾರ್ಟಿ-ಡೆಮಾಕ್ರಟಿಕ್ (ಸಿಜೆಪಿ-ಡಿ) ಎಂಬ ನೂತನ ಬಣ ರಚಿಸಿರುವುದಾಗಿ ಘೋಷಿಸಿದ್ದಾರೆ.
ಅಭಿಜಿತ್ ದೀಪ್ಕೆ ನೇತೃತ್ವದ ಮೂಲ ಸಿಜೆಪಿ ಸಂಘಟನೆಯು ಚಳವಳಿಯ ಯಶಸ್ಸಿನ ಬಳಿಕ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಇದು ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಟೀಮ್ ಆಗಿ ಬದಲಾಗಿದೆ ಎಂದು ಮನೀಶ್ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡಿರುವ ಹಾಗೂ ಬೀದಿಗಿಳಿದು ಹೋರಾಡಿದ ಸ್ವಯಂಸೇವಕರನ್ನು ಕಡೆಗಣಿಸಿ 12 ಸದಸ್ಯರ ರಾಷ್ಟ್ರೀಯ ತಂಡವನ್ನು ರಚಿಸಲಾಗಿದೆ. ಇದರಲ್ಲಿ 8 ಮಂದಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದವರಾಗಿದ್ದು, ಉಳಿದವರು ಕಾಲೇಜು ಸ್ನೇಹಿತರಿದ್ದಾರೆ ಎಂದು ಬ್ರಹ್ಮಭಟ್ ಹೇಳಿದ್ದಾರೆ.
ಪ್ರತಿ ರಾಜ್ಯದಿಂದ ಐವರು ಹೋರಾಟಗಾರರನ್ನು ಒಳಗೊಂಡ ಪ್ರಜಾಸತ್ತಾತ್ಮಕ ಮಾದರಿಯನ್ನು ತಾವು ಪ್ರಸ್ತಾಪಿಸಿದ್ದರೂ ಅದನ್ನು ನಾಯಕತ್ವ ತಿರಸ್ಕರಿಸಿದೆ. ಅಲ್ಲದೆ ಮಹಿಳೆಯರು, ಮುಸ್ಲಿಮರು, ಸಿಖ್ಖರು ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಈ ಸಮಿತಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಅಣ್ಣಾ ಹಜಾರೆ ಚಳವಳಿಯ ಸಂದರ್ಭದಲ್ಲಿದ್ದಂತೆಯೇ ಈ ಸಂಘಟನೆಯ ಸಮಿತಿ ರಚನೆಯ ಹಿಂದೆಯೂ ಅರವಿಂದ ಕೇಜ್ರಿವಾಲ್ ಕುತಂತ್ರವಿದೆ ಎಂದೂ ಅವರು ಆರೋಪಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ, ಲಾಠಿ ಪ್ರಹಾರ, ಪ್ರತಿಭಟನೆಗಳ ಫಲವಾಗಿ ಈ ಹೋರಾಟ 2ರಿಂದ 2.5 ಕೋಟಿ ಜನರನ್ನು ತಲುಪಿತ್ತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ನೊಂದ ಹಾಗೂ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದನ್ನು ಬಿಟ್ಟು, ನಾಯಕತ್ವವು ಜಾರ್ಖಂಡ್ ವಿದ್ಯಾರ್ಥಿ ಹೋರಾಟದಿಂದಲೂ ದೂರವುಳಿದು ಸ್ವತಃ 'ಪೇಪರ್ ಮಾಫಿಯಾ' ರೀತಿಯಲ್ಲಿ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ನೂತನ ಬಣವಾದ ಸಿಜೆಪಿ-ಡಿ, ಪಾರದರ್ಶಕತೆ ಮತ್ತು ಜವಾಬ್ದಾರಿಗೆ ಆದ್ಯತೆ ನೀಡಲಿದೆ ಎಂದು ಬ್ರಹ್ಮಭಟ್ ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳು, ವಾಟ್ಸ್‌ಆಯಪ್ ಮತ್ತು ಮಿಸ್ಡ್ ಕಾಲ್ ಸೌಲಭ್ಯಗಳ ಮೂಲಕ ಸಾರ್ವಜನಿಕರು ಹೊಸ ಬಣವನ್ನು ಸೇರಬಹುದಾಗಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜಿ ಇಲ್ಲದೆ ಧ್ವನಿ ಎತ್ತುವುದಾಗಿ ಅವರು ತಿಳಿಸಿದ್ದಾರೆ.
ನಾವು 'ಬಿ ಟೀಂ' ಅಲ್ಲ
ಮನೀಶ್ ಬ್ರಹ್ಮಭಟ್ ಆರೋಪ ಕುರಿತು ಮಾತನಾಡಿದ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆ, 'ಮಹಾರಾಷ್ಟ್ರ ಮುಖ್ಯಮಂತ್ರಿ ನಮ್ಮನ್ನು ಕಾಂಗ್ರೆಸ್‌ನ 'ಬಿ' ಟೀಂ ಎಂದರೆ, ಕೆಲವರು ಆಮ್ ಆದ್ಮಿ ಪಕ್ಷದ 'ಬಿ' ಟೀಂ ಎನ್ನುತ್ತಿದ್ದಾರೆ. ಮೊದಲು ಅವರೆಲ್ಲ ಒಟ್ಟಿಗೆ ಕುಳಿತು ನಾವು ಯಾರ 'ಬಿ' ಟೀಂ ಎಂದು ನಿರ್ಧರಿಸಲಿ. ಆದರೆ, ನನ್ನ ಪ್ರಕಾರ, ನಾವೆಂದಿಗೂ ವಿದ್ಯಾರ್ಥಿಗಳ 'ಎ' ಟೀಂ ಎಂದು ಹೇಳಿದ್ದಾರೆ.

