ನವದೆಹಲಿ: ಇಟಲಿಯ ಅತಿ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಎನ್ನುವ ಖ್ಯಾತಿಗೆ ಪಾತ್ರವಾದ ಜಾರ್ಜಿಯ ಮೆಲೊನಿ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
49 ವರ್ಷದ ಮೆಲೊನಿ ಅವರು 2022ರ ಅ.22ರಂದು ಇಟಲಿಯ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದರು.
ಸೆ.3ಕ್ಕೆ ಅವರು ಪ್ರಧಾನಿಯಾಗಿ 1,413 ದಿನಗಳನ್ನು ಪೂರೈಸಿದ್ದಾರೆ. ಈ ಮೂಲಕ ಎರಡನೇ ವಿಶ್ವಯುದ್ಧದ ನಂತರ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಇಟಲಿಯ ಪ್ರಧಾನಿ ಎನಿಸಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ನನ್ನ ಸ್ನೇಹಿತೆ ಹಾಗೂ ಪ್ರಧಾನಿ ಮೆಲೊನಿ ಅವರಿಗೆ ಅಭಿನಂದನೆ. ಈ ಐತಿಹಾಸಿಕ ಸಾಧನೆಯು ಇಟಲಿಯ ಜನರು ಅವರ ಮೇಲಿಟ್ಟಿರುವ ನಂಬಿಕೆ ಮತ್ತು ಅವರ ನಾಯಕತ್ವದ ಮೇಲಿರುವ ಭರವಸೆಯ ಸಂಕೇತವಾಗಿದೆ' ಎಂದು ಹೇಳಿದ್ದಾರೆ.
ಮೆಲೊನಿ ಅವರೊಂದಿಗಿನ ನನ್ನ ಸ್ನೇಹವು ಭಾರತ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳ್ಳಲು ಕಾರಣವಾಗಿದೆ. ಉಭಯ ದೇಶಗಳ ಜನರ ಉತ್ತಮ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಈ ನಿಕಟ ಸಹಕಾರವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮೋದಿ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಮೆಲೊನಿ, 'ನರೇಂದ್ರ ಮೋದಿ ಅವರೇ, ನಿಮ್ಮ ಶುಭಾಶಯಗಳು ಮತ್ತು ಗೆಳತನಕ್ಕಾಗಿ ಧನ್ಯವಾದಗಳು. ಭಾರತ ಮತ್ತು ಇಟಲಿಯ ಸಂಬಂಧವು ಎಂದಿಗಿಂತಲೂ ಇದೀಗ ಬಲಿಷ್ಠವಾಗಿದೆ. ಎರಡೂ ದೇಶಗಳು ಒಟ್ಟಾಗಿ ಯುರೋಪ್ ಮತ್ತು ಏಷ್ಯಾದ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತಿವೆ' ಎಂದು ಹೇಳಿದ್ದಾರೆ.
ಜಾರ್ಜಿಯ ಮೆಲೊನಿ ಅವರು ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ.
ಮೋದಿ ಅವರು ಸತತವಾಗಿ 4,399 ದಿನಗಳ ಕಾಲ ಅಧಿಕಾರದಲ್ಲಿರುವ ಮೂಲಕ 2026ರ ಜೂನ್ 10ಕ್ಕೆ ಅತಿ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಭಾರತದ ಪ್ರಧಾನ ಮಂತ್ರಿ ಎನ್ನುವ ಸಾಧನೆಗೆ ಪಾತ್ರರಾಗಿದ್ದರು.

