HEALTH TIPS

ಖಾಸಗೀಕರಣ ಇಲ್ಲ: ಇಸ್ರೊ ಸ್ಪಷ್ಟನೆ

ನವದೆಹಲಿ(PTI): 'ಸಂಸ್ಥೆಯನ್ನು ಖಾಸಗೀಕರಣ ಮಾಡುವುದಿಲ್ಲ ಹಾಗೂ ಇದರ ಮಹತ್ವ ಕುಂಠಿತಗೊಳಿಸುವುದಿಲ್ಲ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಭಾನುವಾರ ಸ್ಪಷ್ಟೀಕರಣ ನೀಡಿದೆ. 


ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಇಸ್ರೊ, 'ಸಂಸ್ಥೆಯ ಚಟುವಟಿಕೆಗಳಲ್ಲಿ ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆಯಿಂದ ದೇಶದ ಮುಂದಿನ ತಲೆಮಾರಿನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಬಲ ಸಿಗಲಿದೆ.

ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಸಾಮರ್ಥ್ಯ ಹೆಚ್ಚಳವೂ ಸಾಧ್ಯವಾಗಲಿದೆ' ಎಂದು ಪ್ರತಿಪಾದಿಸಿದೆ.

ಸಂಸ್ಥೆಯ ಕೆಲ ಕಾರ್ಯಗಳನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸುವ ಪ್ರಸ್ತಾವದ ಬಗ್ಗೆ ಅಧಿಕೃತವಾಗಿ ಸ್ಪಷ್ಟೀಕರಣ ನೀಡುವಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ನೌಕರರ ಒಂಬತ್ತು ಸಂಘಟನೆಗಳು ಒತ್ತಾಯಿಸಿದ್ದವು. ಇಸ್ರೊ ಮುಖ್ಯಸ್ಥ ವಿ.ನಾರಾಯಣನ್ ಅವರಿಗೆ ಈ ಸಂಘಟನೆಗಳು ಸೆ.4ರಂದು ಈಕುರಿತು ಪತ್ರ ಬರೆದಿದ್ದವು.

ಇದರ ಬೆನ್ನಲ್ಲೇ, ಇಸ್ರೊ ಈ ಸ್ಪಷ್ಟೀಕರಣ ನೀಡುವ ಮೂಲಕ, ಖಾಸಗೀಕರಣ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದೆ.

ಪತ್ರದಲ್ಲಿ ಏನಿತ್ತು?: ಆಗಸ್ಟ್‌ 21ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅಧಿಕಾರ ಕೇಂದ್ರದ (ಇನ್‌-ಸ್ಪೇಸ್‌) ಅಧ್ಯಕ್ಷ ಪವನ್‌ ಗೋಯೆಂಕಾ,'ಬರುವ ದಿನಗಳಲ್ಲಿ ಇಸ್ರೊ ಉಪಗ್ರಹ ಉಡ್ಡಯನ ವಾಹನಗಳನ್ನು ತಯಾರಿಸುವುದಿಲ್ಲ. ಖಾಸಗಿ ವಲಯದ ಕಂಪನಿಗಳು ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು) ಈ ಕಾರ್ಯ ಮಾಡಲಿವೆ' ಎಂದು ಹೇಳಿದ್ದರು ಎನ್ನಲಾಗಿದೆ.

ಗೋಯೆಂಕಾ ಅವರ ಈ ಹೇಳಿಕೆಯನ್ನು ನೌಕರರ ಸಂಘಟನೆಗಳು ಪತ್ರದಲ್ಲಿ ಉಲ್ಲೇಖಿಸಿದ್ದವು. 'ಇಸ್ರೊದ ತಯಾರಿಕೆ ಮತ್ತು ಕಾರ್ಯನಿರ್ವಹಣಾ ವಿಭಾಗಗಳನ್ನು ಖಾಸಗಿಯವರಿಗೆ ವರ್ಗಾಯಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ. ಇಂತಹ ಕ್ರಮಗಳಿಂದ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸಂಸ್ಥೆ ವಹಿಸಲಿರುವ ಪಾತ್ರ, ಹಾಲಿ ನೌಕರರ ಮೇಲೆ ಆಗುವ ಪರಿಣಾಮಗಳ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ' ಎಂದು ಕಳವಳ ವ್ಯಕ್ತಪಡಿಸಿದ್ದವು.

'ಇಸ್ರೊ ಕೈಗೊಳ್ಳುವ ವಾಣಿಜ್ಯ ಉದ್ದೇಶದ ನಿರ್ದಿಷ್ಟ ಚಟುವಟಿಕೆಗಳಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಯನ್ನು ಒಪ್ಪಬಹುದು. ಆದರೆ, ವಿವಿಧ ರಾಕೆಟ್‌ಗಳು, ಗಗನನೌಕೆಗಳ ಉಡ್ಡಯನಕ್ಕೆ ಅಭಿವೃದ್ಧಿಪಡಿಸಿರುವ ಮೂಲಸೌಕರ್ಯಗಳನ್ನು ಖಾಸಗಿ ಯವರಿಗೆ ನೀಡುವುದನ್ನು ಒಪ್ಪಲು ಸಾಧ್ಯ ಇಲ್ಲ' ಎಂದು ಪತ್ರದಲ್ಲಿ ಹೇಳಿದ್ದವು.

'ಗೋಯೆಂಕಾ ಪ್ರಸ್ತಾಪಿಸಿದ್ದ ವಿಚಾರ ಕುರಿತಂತೆ ಬಾಹ್ಯಾಕಾಶ ಇಲಾಖೆಯಿಂದ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಉದ್ದೇಶಿತ ಖಾಸಗೀಕರಣಕ್ಕೆ ಸಂಬಂಧಿಸಿದ ನೀತಿ, ಅದು ಒಳಗೊಂಡಿರುವ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಅಂಶಗಳ ಬಗ್ಗೆಯೂ ಇಲಾಖೆ ತಿಳಿಸಿಲ್ಲ' ಎಂದು ಹೇಳಿದ್ದವು.

ಉದ್ಯೋಗಿಗಳ ಕಳವಳ

* ಇಸ್ರೊ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ರಾಷ್ಟ್ರೀಯ ಸ್ವತ್ತು. ಇವುಗಳ ವರ್ಗಾವಣೆ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕಲ್ಲದೇ, ಉತ್ತರದಾಯಿತ್ವವೂ ಇರಬೇಕು

* ಪಿಎಸ್‌ಎಲ್‌ವಿ, ಎಲ್‌ವಿಎಂ3, ಎಸ್‌ಎಸ್‌ಎಲ್‌ವಿಯಂತಹ ರಾಕೆಟ್‌ಗಳ ವಿನ್ಯಾಸ, ಅಭಿವೃದ್ಧಿ, ಪರೀಕ್ಷೆಯಂತಹ ಕಾರ್ಯಾಚರಣೆಗಳನ್ನು ಇಸ್ರೊ ಮುಂದುವರಿಸಲಿದೆಯೇ ಅಥವಾ ನಿಲ್ಲಿಸಲಿದೆಯೇ?

* ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನೌಕರರು, ಮಂಜೂರಾದ ಹುದ್ದೆಗಳ ಮೇಲೆ ಏನು ಪರಿಣಾಮ ಆಗಲಿದೆ. ಇಸ್ರೊದ ವಿವಿಧ ಕೇಂದ್ರಗಳಲ್ಲಿ ವೈಜ್ಞಾನಿಕ/ತಾಂತ್ರಿಕ/ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ಹೇಗಿರಲಿದೆ?

'ಬಾಹ್ಯಾಕಾಶ ಕ್ಷೇತ್ರದ ಬುನಾದಿ ಇಸ್ರೊ'

'2020ರಿಂದ ಇಸ್ರೊದಲ್ಲಿ ಸುಧಾರಣೆಗಳಿಗೆ ಚಾಲನೆ ನೀಡಿ ರಾಕೆಟ್‌, ಉಪಗ್ರಹಗಳ ಉತ್ಪಾದನೆಯಲ್ಲಿ ಖಾಸಗಿ ವಲಯಕ್ಕೆ ಅವಕಾಶ ನೀಡಲಾಗಿದೆ. ಆದಾಗ್ಯೂ, ಸಂಸ್ಥೆಯು ದೇಶದ ಬಾಹ್ಯಾಕಾಶ ಕ್ಷೇತ್ರದ ಭದ್ರಬುನಾದಿ ಯಾಗಿಯೇ ಇರಲಿದೆ' ಎಂದು ಇನ್‌-ಸ್ಪೇಸ್‌ ಅಧ್ಯಕ್ಷ ಪವನ್‌ ಗೋಯೆಂಕಾ ಅವರು 'ಎಕ್ಸ್‌'ನಲ್ಲಿ ಭಾನುವಾರ ಬರೆದುಕೊಂಡಿದ್ದಾರೆ.

'2030ರ ವೇಳೆಗೆ, ಪ್ರತಿ ವರ್ಷ 50 ಉಡ್ಡಯನ ಕೈಗೊಳ್ಳಬೇಕು ಎಂಬ ಗುರಿ ಸಾಧನೆಗೆ ಇಸ್ರೊ ಮತ್ತು ಖಾಸಗಿ ಕಂಪನಿಗಳು ಒಟ್ಟಿಗೇ ಕೆಲಸ ಮಾಡುವುದು ಅಗತ್ಯ. ಒಂದೇ ಸಂಘಟನೆಯಿಂದ ಈ ಗುರಿ ಸಾಧನೆ ಸಾಧ್ಯವಿಲ್ಲ. ಖಾಸಗಿ ಕಂಪನಿ ಗಳು ರಾಕೆಟ್‌, ಉಪಗ್ರಹಗಳ ಉತ್ಪಾದನೆ, ಉಡ್ಡಯನ ಸಾಮರ್ಥ್ಯ ಹೆಚ್ಚಿಸಬೇಕು ಹಾಗೂ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು' ಎಂದಿದ್ದಾರೆ.

ಉದ್ದೇಶಪೂರ್ವಕ ನಿರ್ಬಂಧ: ಕಾಂಗ್ರೆಸ್

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್‌) ಉತ್ತೇಜನ ನೀಡುವ ಹೆಸರಿನಲ್ಲಿ ಇಸ್ರೊದ ಪಾತ್ರಕ್ಕೆ ಉದ್ದೇಶಪೂರ್ವಕವಾಗಿ ನಿರ್ಬಂಧ ಹೇರುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕೆಲ ಕಾರ್ಯಾಚರಣೆಗಳನ್ನು ಖಾಸಗೀಕರಣ ಮಾಡುವ ಪ್ರಸ್ತಾವ ಕುರಿತು ಸಂಸ್ಥೆಯ ನೌಕರರ ಸಂಘಟನೆಗಳು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರಿಗೆ ಪತ್ರ ಬರೆದಿರುವ ಬಗ್ಗೆ ಪ್ರಕಟವಾದ ವರದಿಯನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಉದ್ದೇಶಿತ ಖಾಸಗೀಕರಣ ಕುರಿತು ಇಸ್ರೊ ನೌಕರರೇ ಧ್ವನಿ ಎತ್ತಿರುವುದು ಶ್ಲಾಘನೀಯ' ಎಂದೂ ಅವರು ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries