ಬದಿಯಡ್ಕ: ಇಂದಿನ ಆಧುನಿಕ ಯುಗದಲ್ಲಿ ನಾವು ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ವಿಶೇಷವಾಗಿ ನಮ್ಮ ಯುವಜನತೆ ಮತ್ತು ಮಕ್ಕಳು ಎದುರಿಸುತ್ತಿರುವ ಮಾನಸಿಕ ಒತ್ತಡ, ಮಾದಕ ದ್ರವ್ಯಗಳ ದುಷ್ಟ ಚಟ ಹಾಗೂ ಮೊಬೈಲ್-ಇಂಟರ್ನೆಟ್ಗಳ ಡಿಜಿಟಲ್ ವ್ಯಸನ ನಮ್ಮೆಲ್ಲರಿಗೂ ದೊಡ್ಡ ಚಿಂತೆಯ ವಿಷಯವಾಗಿದೆ. ಇವುಗಳಿಂದ ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವೇ ಈ `ರಿಲ್ಯಾಕ್ಸ್' ಯೋಜನೆ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಹೇಳಿದರು.
ಸರ್ಕಾರದ ನೂರು ದಿನಗಳ ಕರ್ಮಯೋಜನೆಯ ಭಾಗವಾಗಿ, ಕೇರಳದ ಪ್ರತಿಯೊಂದು ಅಬಕಾರಿ ರೇಂಜ್ ಆಫೀಸ್ ವ್ಯಾಪ್ತಿಯಲ್ಲಿ ಸೂಕ್ತವಾದ ಸ್ಥಳವನ್ನು ಗುರುತಿಸಿ, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಅದನ್ನು ಸ್ವಚ್ಛಗೊಳಿಸಿ, ಆ ಪ್ರದೇಶದ ಜನರು ತಮ್ಮ ಬಿಡುವಿನ ಸಮಯವನ್ನು ವಿವಿಧ ಕಲೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಗ್ಯವಾಗುವಂತೆ ಮಾಡುವ `ರಿಲೇಕ್ಸ್' ಯೋಜನೆಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಗ್ರಾಮದ ಯುವಕರು, ಕ್ರೀಡಾಪಟುಗಳು, ಮುದ್ದು ಮಕ್ಕಳು ಹಾಗೂ ಗೌರವಾನ್ವಿತ ಹಿರಿಯ ನಾಗರಿಕರು ತಮ್ಮ ಬಿಡುವಿನ ವೇಳೆಯಲ್ಲಿ ಬಂದು ಪ್ರಶಾಂತವಾಗಿ ಕುಳಿತುಕೊಳ್ಳಲು, ಮಾತುಕತೆ ನಡೆಸಲು, ಕಲೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಇದು ಅತ್ಯಂತ ಸುರಕ್ಷಿತ ಮತ್ತು ಅನುಕೂಲಕರ ತಾಣವಾಗಲಿದೆ. ನಮ್ಮ ಯುವಜನತೆಯ ಶಕ್ತಿ ಮತ್ತು ಸೃಜನಶೀಲತೆಯನ್ನು ಸರಿಹಾದಿಯಲ್ಲಿ ಕೊಂಡೊಯ್ಯಲು ಇಂತಹ ತೆರೆದ, ಸ್ವಚ್ಛವಾದ ಮತ್ತು ಪ್ರಕೃತಿದತ್ತವಾದ ಸಾರ್ವಜನಿಕ ಜಾಗಗಳ ಅಗತ್ಯತೆ ಇಂದಿನ ದಿನಗಳಲ್ಲಿ ತೀರಾ ಅಗತ್ಯವಾಗಿದೆ ಎಂದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು, ಬದಿಯಡ್ಕ ಗ್ರಾಮ ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ಅವಿನಾಶ್ ರೈ, ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ. ಶುಭಹಾರೈಸಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಾಹಿನಾ, ಉಷಾ, ಮಧುಸೂದನ, ಹರೀಶ, ಅಬಕಾರಿ ಇಲಾಖೆಯ ಅಧಿಕಾರಿಗಳು, ಶುಚಿತ್ವ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡು ಸ್ಥಳ ಶುಚೀಕರಣದಲ್ಲಿ ಪಾಲ್ಗೊಂಡರು. ಅಬಕಾರಿ ಇಲಾಖೆಯ ಅಧಿಕಾರಿ ಜನಾರ್ದನ ವಂದಿಸಿದರು.

.jpg)
.jpg)
