ಬದಿಯಡ್ಕ: ವಿಜ್ಞಾನ, ಇತಿಹಾಸ, ಕಲೆ, ಸಾಹಿತ್ಯ ಮತ್ತು ಮಹಾಪುರುಷರ ಜೀವನ ಚರಿತ್ರೆಗಳು ನಮ್ಮ ಬದುಕಿನ ಸವಾಲುಗಳನ್ನು ಎದುರಿಸಲು ದಾರಿದೀಪವಾಗಬಲ್ಲವು. ಕೃಷ್ಣನು ತನ್ನ ಕೈಯಲ್ಲಿ ಕೊಳಲನ್ನು ಹಿಡಿದು ಜಗತ್ತನ್ನು ಮುದಗೊಳಿಸಿದಂತೆ, ನಾವು ಪುಸ್ತಕಗಳನ್ನು ಕೈಗೆತ್ತಿಕೊಂಡು ನಮ್ಮ ಅಂತಃಕರಣದ ಜ್ಞಾನಭಂಡಾರವನ್ನು ವೃದ್ಧಿಸಬೇಕು. ಆಚರಣೆಗಳ ಮೂಲಕ ನಮ್ಮ ಗ್ರಾಮೀಣ ಸಂಸ್ಕøತಿಯ ಅನಾವರಣವಾಗುತ್ತದೆ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ ಹೇಳಿದರು.
ನೀರ್ಚಾಲು ಸಮೀಪದ ಮಾಡತ್ತಡ್ಕ ಹರಿಹರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ನಾಲ್ಕನೇ ವಾರ್ಷಿಕೋತ್ಸವ ಓಣಂ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಹರಿಹರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ಅಧ್ಯಕ್ಷ ನಾಗೇಶ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂಟಿಕಾನ ಶಾಲೆಯ ನಿವೃತ್ತ ಅಧ್ಯಾಪಕ ವೆಂಕಟ್ರಾಜೆ ವಾಶೆಮನೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ಹರಿಹರ ಭಜನಾ ಮಂದಿರದಲ್ಲಿ ನೂತನವಾಗಿ ಆರಂಭಿಸಲಾದ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಒಂದೆಡೆ ನಾಡಿನೆಲ್ಲೆಡೆ ಭಗವಾನ್ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಸಡಗರ, ಮತ್ತೊಂದೆಡೆ ಜ್ಞಾನ ದೇಗುಲವಾದ ಈ ನೂತನ ಗ್ರಂಥಾಲಯದ ಉದ್ಘಾಟನೆ. ಮೇಲ್ನೋಟಕ್ಕೆ ಇವೆರಡೂ ವಿಭಿನ್ನ ಕಾರ್ಯಕ್ರಮಗಳಂತೆ ಕಂಡರೂ, ಇವುಗಳ ನಡುವೆ ಒಂದು ಅತ್ಯಂತ ಸುಂದರವಾದ ನಂಟಿದೆ. ಶ್ರೀ ಕೃಷ್ಣ ಎಂದರೆ ನಮ್ಮೆಲ್ಲರ ಕಣ್ಣಿಗೆ ಕಟ್ಟುವ ದೃಶ್ಯ ಆತನ ತುಂಟಾಟ, ಕೊಳಲಿನ ನಾದ ಮತ್ತು ಗೋಕುಲದ ಲೀಲೆಗಳು. ಆದರೆ, ಕೃಷ್ಣ ಕೇವಲ ಲೀಲಾಮಯನಲ್ಲ; ಆತ ಜ್ಞಾನದ ಅಧಿದೇವತೆ. ಅಂತಹ ಜ್ಞಾನಸ್ವರೂಪಿ ಕೃಷ್ಣನ ಜನ್ಮದಿನದಂದೇ, ನಮ್ಮ ಅಜ್ಞಾನದ ಕತ್ತಲೆಯನ್ನು ಓಡಿಸುವ ಈ 'ಗ್ರಂಥಾಲಯ' ಲೋಕಾರ್ಪಣೆಯಾಗುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದರು.
ಶ್ರೀ ಹರಿಹರ ಭಜನಾ ಮಂದಿರದ ಅಧ್ಯಕ್ಷ ಶಿವ ಭಂಡಾರಿ ಅಣಬೈಲು, ಕೋಶಾಧಿಕಾರಿ ಸುಬ್ರಹ್ಮಣ್ಯ ಶರ್ಮ ಅಣಬೈಲು, ಬಾಲಗೋಕುಲದ ಬದಿಯಡ್ಕ ತಾಲೂಕು ಅಧ್ಯಕ್ಷ ರಮೇಶ್ ಚೌಕ್ಕಾರು, ಶ್ರೀ ಹರಿಹರ ಮಾತೃ ಸಮಿತಿಯ ಅಧ್ಯಕ್ಷೆ ಸುಶೀಲ ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಬಾಲಗೋಕುಲದ ಶಿಕ್ಷಕಿ ಪ್ರೇಮಲತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಹರಿಹರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ಸದಸ್ಯ ಸುನೋಜ್ ಮಿಂಚಿನಡ್ಕ ಸ್ವಾಗತಿಸಿ, ಮನೋಜ್ ಕುಮಾರ್ ವಂದಿಸಿದರು.

.jpg)
.jpg)
