ಕಾಸರಗೋಡು: ರಾಜ್ಯದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿಯನ್ನು ಪಡೆದ ನಂತರ ಅರ್ಜುನ್ ಪಾಂಡಿಯನ್ ಕಾಸರಗೋಡು ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದ ಕೆಲವೇ ತಿಂಗಳಲ್ಲಿ ಜಿಲ್ಲೆಯಲ್ಲಿ ಮಹತ್ವದ ಕೆಲಸಗಳನ್ನು ನಿರ್ವಹಿಸುವ ಮೂಲಕ ಜನಾನುರಾಗಿ ಜಿಲ್ಲಾಧಿಕಾರಿಯಾಗಿ ಖ್ಯಾತಿ ಗಳಿಸಿದ್ದಾರೆ. ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನಡೆದ 16ನೇ ಕೇರಳ ವಿಧಾನಸಭೆ ಚುನಾವಣೆಯನ್ನು ಸುಗಮವಾಗಿ ಹಾಗೂ ದೋಷರಹಿತವಾಗಿ ನಡೆಸುವ ಮೂಲಕ ಅವರು ಜಿಲ್ಲಾಡಳಿತದಲ್ಲಿ ತಮ್ಮ ಬಲವಾದ ಛಾಪು ಮೂಡಿಸಿದರು. ಉತ್ಸಾಹಿ ಪರ್ವತಾರೋಹಿಯಾಗಿರುವ ಅರ್ಜುನ್ ಪಾಂಡಿಯನ್ ಅವರಿಗೆ, ಸಾರ್ವತ್ರಿಕ ಚುನಾವಣೆಯು ಯಾವುದೇ ದೂರುಗಳಿಲ್ಲದೆ ಮುಕ್ತಾಯಗೊಳ್ಳುವಂತೆ ನೋಡಿಕೊಂಡಿದ್ದು ಮತ್ತೊಂದು ಯಶಸ್ವಿ ಕಾರ್ಯಾಚರಣೆಯಾಗಿತ್ತು.
ಅಧಿಕಾರ ವಹಿಸಿಕೊಂಡ ದಿನದಿಂದಲೇ ನೆಲ್ಲಿಕುಂಜೆ ಕಡಲತೀರದಲ್ಲಿ ಓಟದ ಅಭ್ಯಾಸವನ್ನು ರೂಢಿಸಿಕೊಂಡಿದ್ದ ಜಿಲ್ಲಾಧಿಕಾರಿ, 'ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿ'ಯ ಪರಿಕಲ್ಪನೆಗೆ ಚಾಲನೆ ನೀಡಿದ್ದರು.
ಕಾಸರಗೋಡು ನಗರಸಭೆ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಮೇಲ್ದರ್ಜೆಗೇರಿಸಲು ಕ್ರೀಡಾ ಇಲಾಖೆಗೆ 14 ಕೋಟಿ ರೂ.ಮೊತ್ತದ ಪ್ರಸ್ತಾವನೆ ಸಲ್ಲಿಸುವ ಮೂಲಕ ಆರಂಭಿಕ ಹೆಜ್ಜೆಯಿರಿಸಿದ್ದಾರೆ. ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ಮಾಣ ಕಾರ್ಯದ ಪ್ರಗತಿಯ ಕುರಿತು ನಡೆಸಲಾದ ನಿರಂತರ ಮಾಸಿಕ ಪರಿಶೀಲನೆಯ ಮೂಲಕ ಈ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಮೂಲಕ ಕಡಿಮೆ ಕಾಲಾವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ನೂತನ ಜಿಲ್ಲಧಿಕಾರಿ ಮೇಲಿದೆ ಮಹತ್ವದ ಜವಾಬ್ದಾರಿ:
ಕಾಸರಗೋಡಿನಂತೆಯೇ ಕೇರಳದ ಹಿಂದುಳಿದ ವಯನಾಡು ಜಿಲ್ಲೆಯ ಹಿಂದುಳಿದ ದಲಿತ ಬುಡಕಟ್ಟು ಜನಾಂಗದಿಂದ ರಾಜ್ಯದ ಮೊದಲ ಐಎಎಸ್ ಅಧಿಕಾರಿಯಾಗಿ ಮೂಡಿಬಂದು ದೇಶದ ಗಮನವನ್ನೇ ಸೆಳೆದಿರುವ ಶ್ರೀಧನ್ಯಾ ಸುರೇಶ್ ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಲಿದ್ದಾರೆ.
ವಯನಾಡಿನ ಗುಡ್ಡಗಡು ಪ್ರದೇಶದ ಕಾಲನಿಯಲ್ಲಿ ಹುಟ್ಟಿ ಬೆಳೆದು, ಛಲದಿಂದ ಕಲಿತು ಯುಪಿಎಸ್ಸಿ ಪರೀಕ್ಷೆಯಲ್ಲಿ 410 ನೇ ರೇಂಕ್ ಪಡೆದು (2018 ನೇ ಸಾಲಿನ) ಐಎಎಸ್ ಪದವಿಗೇರಿದ ಕೇರಳದ ಮೊದಲ ಬುಡಕಟ್ಟು ಜನಾಂಗದ ವನಿತಾ ಜಿಲ್ಲಾಧಿಕರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬಾಲ್ಯದಲ್ಲಿ ಐಡೆಡ್ ಶಾಲೆಯಲ್ಲಿ ಮತ್ತು ಬಳಿಕ ಸರ್ಕಾರಿ ಶಾಲೆಯಲ್ಲಿ ಓದಿದ ಇವರು ದೇವಗಿರಿ ಕಾಲೇಜಿನಿಂದ ಬಯೋಲಜಿಯಲ್ಲಿ ಪದವಿ, ಬಳಿಕ ಕೋಯಿಕ್ಕೋಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಪಡೆದ ನಂತರ ವಯನಾಡಿನಲ್ಲಿ ಎರಡು ವರ್ಷ ಬುಡಕಟ್ಟು ಜನಾಂಗದ ಪ್ರಮೋಟರ್ ಆಗಿಯೂ ದುಡಿದಿದ್ದರು.



