ನವದೆಹಲಿ: ಮಣಿಪುರದ ಸಂಗೀತಗಾರನನ್ನು ಥಳಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ,'ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡ ಅವರು ಭಾರತದ ಈಶಾನ್ಯ ಭಾಗದ ಜನರು ಚೀನಿಯರಂತೆ ಕಾಣುತ್ತಾರೆ ಎಂದು ಹೇಳಿದಾಗ ರಾಹುಲ್ ಎಲ್ಲಿದ್ದರು?' ಎಂದು ಪ್ರಶ್ನಿಸಿದೆ.
ತನ್ನ ಅಪಾರ್ಟ್‌ಮೆಂಟ್ ಮುಂದೆ ಮದ್ಯಪಾನ ಮಾಡಬೇಡಿ ಎಂದು ಹೇಳಿದಕ್ಕೆ, 54 ವರ್ಷದ ಮಣಿಪುರ ಸಂಗೀತಗಾರ ಸಿ. ವಿಕ್ರಮ್ ಸಿಂಗ್ ಅವರನ್ನು ಥಳಿಸಿ ಕೊಲೆ ಮಾಡಲಾಗಿತ್ತು.
ಸಂಗೀತಗಾರನ ಕೊಲೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದ ರಾಹುಲ್ ಗಾಂಧಿ, 'ದೇಶದಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರತೆಯನ್ನು ತಡೆಯಲು ಅಮಿತ್ ಶಾ ಅವರ ಗೃಹಸಚಿವಾಲಯವು ಏನು ಕ್ರಮಕೈಗೊಂಡಿದೆ?' ಎಂದು ಪ್ರಶ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿಬೇಕು ಎಂದು ಆಗ್ರಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದಾಗಲೇ ಒಬ್ಬ ಅಪ್ರಾಪ್ತ ಸೇರಿದಂತೆ, 7 ಜನರನ್ನು ಬಂಧಿಸಿದ್ದಾರೆ.
ರಾಹುಲ್ ಗಾಂಧಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, 'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎಲ್ಲ ನಾಗರಿಕರು ಸುರಕ್ಷಿತವಾಗಿದ್ದಾರೆ. ಭಾರತೀಯರಾಗಿರುವುದರ ಬಗ್ಗೆ ಹೆಮ್ಮೆಪಡುತ್ತಿದ್ದಾರೆ' ಎಂದು ಹೇಳಿದ್ದಾರೆ.
2024ರ ಮೇ ಅಲ್ಲಿ ಪಾಡ್‌ಕಾಸ್ಟ್ ಒಂದರಲ್ಲಿ ಸ್ಯಾಮ್ ಪಿತ್ರೋಡ ಅವರು, ಭಾರತದ ಈಶ್ಯಾನ ಭಾಗದ ಜನರು ಚೀನಿಯರಂತೆ ಮತ್ತು ದಕ್ಷಿಣ ಭಾಗದವರು ಆಫ್ರಿಕಾದವರಂತೆ ಕಾಣುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತ್ತು.

