ಮುಳ್ಳೇರಿಯ: ಗೋಸಾಡ ಶ್ರೀಮಹಿಷಮರ್ದಿನೀ ಕ್ಷೇತ್ರದಲ್ಲಿ ಮಾತೃ ಮಂಡಳಿಯ ವತಿಯಿಂದ 12ನೇ ವರ್ಷದ ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಒಗಳೊಂದಿಗೆ ನಡೆಯಿತು.
ಈ ಸಂದರ್ಭ ನಡೆದ ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದ್ ಮಣಿಯಣಿ ಗೋಸಾಡ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾರ್ಮಿಕ ಮುಂದಾಳು ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರು ಕ್ಷೇತ್ರದ ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಕ್ಷೇತ್ರದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಸೇವಾ ಸಮಿತಿಯಲ್ಲಿ 50 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯರಾದ ಅನಂತ ಭಟ್ ಕುರುಮುಜ್ಜಿ, ದೇವಸ್ಥಾನದಲ್ಲಿ ಮಾತೃ ಮಂಡಳಿಯನ್ನು ಸ್ಥಾಪಿಸಿ ಬೆಳೆಸಿದ ವಸಂತಿ ಟೀಚರ್ ಆಗಲ್ಪಾಡಿ ಹಾಗೂ ದೇವಸ್ಥಾನದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸುಬ್ಬ ಪಟಾಳಿ ಗೋಸಾಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುರೇಶ್ ಆಗಲ್ಪಾಡಿ (ಯುಎಇ), ವಾಣಿ ಪ್ರಸಾದ್ ಅಮ್ಮಣ್ಣಾಯ ಪಾವೂರು, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಡಾ. ವೇಣುಗೋಪಾಲ ಕಳೆಯತ್ತೋಡಿ, ಪರಮೇಶ್ವರ ಭಟ್ ಗೋಸಾಡ, ಹೇಮಲತ ರೈ ಮೇಗಿನ ಬೆಳಿಂಜೆ, ವರ್ಷ, ಸುಧಾಮ ಗೋಸಾಡ ಶುಭ ಹಾರೈಸಿದರು.
ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಗೋಸಾಡದ ವರ್ಷ, ಧನ್ಯಶ್ರೀ ಹಾಗೂ ಜಯೇಶ್ ಶರ್ಮ ಅವರನ್ನು ಅಭಿನಂದಿಸಲಾಯಿತು.
ಕ್ಷೇತ್ರ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಸದಾಶಿವ ರೈ ಗೋಸಾಡ ವಂದಿಸಿದರು. ಅಮೃತ್ ರಾಜ್ ರೈ ಮರತ್ತಿಲ ಕಾರ್ಯಕ್ರಮ ನಿರೂಪಿಸಿದರು.
ವರಮಹಾಲಕ್ಷ್ಮೀ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಧಾರ್ಮಿಕ ಭಕ್ತಿ, ಸೇವಾ ಮನೋಭಾವ ಹಾಗೂ ಸಾಧಕರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

.jpg)
.jpg)
