ನವದೆಹಲಿ: ಅರಾವಳಿ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗೆ ಏಕರೂಪದ ವ್ಯಾಖ್ಯಾನವನ್ನು ರೂಪಿಸಲು ಸುಪ್ರೀಂ ಕೋರ್ಟ್ ರಚಿಸಿದ್ದ ಉನ್ನತಾಧಿಕಾರ ಸಮಿತಿಯು ಆರು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಹೆಚ್ಚುವರಿ ಕಾಲಾವಕಾಶ ಕೋರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಸಮಿತಿಯು ತಾನು ನಿವೃತ್ತಿಗೊಳ್ಳುವುದನ್ನು ಕಾಯುತ್ತಿದೆಯೇ ಎಂದು ಪ್ರಶ್ನಿಸಿದರು ಹಾಗೂ ನವೆಂಬರ್ 30ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.
''ಅವರು ನನ್ನ ನಿವೃತ್ತಿಯ ನಂತರದ ದಿನಾಂಕವನ್ನೇ ಸ್ಪಷ್ಟವಾಗಿ ಕೇಳಬೇಕಿತ್ತು. ಅವರು ನನ್ನ ನಿವೃತ್ತಿಗಾಗಿ ಕಾಯುತ್ತಿರುವಂತೆ ತೋರುತ್ತಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ'' ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮುಂದಿನ ವರ್ಷ ಫೆಬ್ರವರಿ 9ರಂದು ನಿವೃತ್ತರಾಗಲಿದ್ದಾರೆ.
ಹಗಲಿರುಳು ಕೆಲಸ ಮಾಡುವಂತೆ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಜಯಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠವು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ ಮಹಾನಿರ್ದೇಶಕಿ ಕಾಂಚನ್ ದೇವಿ ನೇತೃತ್ವದ ಐವರು ಸದಸ್ಯರ ಸಮಿತಿಗೆ ಸೂಚಿಸಿತು. ಇನ್ನು ಮುಂದೆ ಯಾವುದೇ ವಿಸ್ತರಣೆ ನೀಡುವುದಿಲ್ಲ ಎಂಬುದಾಗಿಯೂ ಅದು ಸ್ಪಷ್ಟಪಡಿಸಿತು.
''ಉನ್ನತಾಧಿಕಾರ ಸಮಿತಿಯು ತನ್ನ ಮೊದಲ ನಿರ್ಧಾರದಲ್ಲೇ 2027 ಫೆಬ್ರವರಿ 28ರವರೆಗೆ ಕಾಲಾವಕಾಶ ಕೋರಿದೆ. ನಾವು ಈ ಮನವಿಯನ್ನು ತಿರಸ್ಕರಿಸುತ್ತೇವೆ. ಸಮಿತಿಯು ಹಗಲಿರುಳು ಶ್ರಮಿಸಿ 2026 ನವೆಂಬರ್ 30ರೊಳಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಬೇಕು. ಯಾವುದೇ ಮುಂದಿನ ವಿಸ್ತರಣೆಯನ್ನು ನೀಡುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ'' ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿತು.
ಅದೂ ಅಲ್ಲದೆ, ತುರ್ತು ವಿಚಾರಗಳು ಏನಾದರೂ ಇದ್ದರೆ ಇಡೀ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯದೆ ಅವುಗಳ ಬಗ್ಗೆ ಮಧ್ಯಂತರ ವರದಿಗಳನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ಸಮಿತಿಗೆ ಸೂಚಿಸಿತು.
ಪರಿಸರ ಸೂಕ್ಷ್ಮ ಪ್ರದೇಶವಾದ ಅರಾವಳಿಯ ದೊಡ್ಡ ಭಾಗವನ್ನು ಗಣಿಗಾರಿಕೆಗೆ ಮುಕ್ತವಾಗಿಸಬಹುದು ಎಂಬ ಆತಂಕ ಮೂಡಿಸಿದ್ದ ವಿವಾದಾತ್ಮಕ ವ್ಯಾಖ್ಯಾನವೊಂದನ್ನು ಸುಪ್ರೀಂ ಕೋರ್ಟ್ ತನ್ನ 2025ರ ನವೆಂಬರ್ 20ರ ಆದೇಶದಲ್ಲಿ ಅಂಗೀಕರಿಸಿತ್ತು. ಅದನ್ನು ಪ್ರಶ್ನಿಸಿ ಪರಿಸರ ಕಾರ್ಯಕರ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದ್ದ ಸುಪ್ರೀಂ ಕೋರ್ಟ್, ತನ್ನ ಹಿಂದಿನ ಆದೇಶವನ್ನು ತಡೆಹಿಡಿದಿತ್ತು ಹಾಗೂ ಹೊಸ ವ್ಯಾಖ್ಯಾನ ರೂಪಿಸಲು ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿತ್ತು.
ಹಿಂದೆ ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯು, ಅರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರದ ಭೂಪ್ರದೇಶವನ್ನಷ್ಟೇ 'ಅರಾವಳಿ ಪರ್ವತ' ಎಂಬುದಾಗಿ ಪರಿಗಣಿಸಬಹುದು ಎಂದು ಹೇಳಿತ್ತು. ಅದೂ ಅಲ್ಲದೆ, ಇಂಥ ಎರಡು ಪರ್ವತಗಳು ಪರಸ್ಪರ 500 ಮೀಟರ್ ಅಂತರದಲ್ಲಿ ಇದ್ದರೆ ಮಾತ್ರ ಅವುಗಳು 'ಅರಾವಳಿ ಶ್ರೇಣಿ'ಯಾಗುತ್ತವೆ ಎಂದು ಹೇಳಿತ್ತು.
ಆದರೆ, ಕೇವಲ ಎತ್ತರವನ್ನು ಮಾನದಂಡವಾಗಿಟ್ಟುಕೊಂಡರೆ ವಿಶಾಲ ಪರಿಸರ ವ್ಯವಸ್ಥೆಯ ಭಾಗವಾಗಿರುವ ಅನೇಕ ಸಣ್ಣ ಬೆಟ್ಟಗಳು ಮತ್ತು ಗುಡ್ಡಗಳು ಅರಾವಳಿ ಪರ್ವತ ಶ್ರೇಣಿಯ ವ್ಯಾಪ್ತಿಯಿಂದ ಕೈಬಿಟ್ಟುಹೋಗುತ್ತವೆ ಎಂಬ ಆತಂಕ ವ್ಯಕ್ತವಾಯಿತು. ಈ ವಿವಾದವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು, 2025 ಡಿಸೆಂಬರ್ 29ರಂದು ತನ್ನ ಹಿಂದಿನ ಆದೇಶವನ್ನು ಅಮಾನತಿನಲ್ಲಿಟ್ಟಿತು. ಅಲ್ಲದೆ, ಹೊಸ ಪ್ರಕ್ರಿಯೆ ಮುಗಿಯುವವರೆಗೆ ಹೊಸ ಗಣಿಗಾರಿಕೆ ಪರವಾನಗಿ ಅಥವಾ ಅಸ್ತಿತ್ವದಲ್ಲಿರುವ ಗುತ್ತಿಗೆಗಳ ನವೀಕರಣವನ್ನು ನೀಡಬಾರದು ಎಂದು ನಿರ್ದೇಶಿಸಿತು.

