SIR ಕುರಿತು ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ವರದಿಯಾಗಿದ್ದ ಹಿನ್ನೆಲೆಯಲ್ಲಿ ಆಯೋಗ ಈ ಸ್ಪಷ್ಟನೆ ನೀಡಿದೆ.
"ಇತ್ತೀಚಿನ ತಿಂಗಳುಗಳಲ್ಲಿ ಆಯೋಗವು ದೇಶಾದ್ಯಂತ SIR ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಬಿಹಾರದಿಂದ ಆರಂಭಿಸಿ, ಪಶ್ಚಿಮ ಬಂಗಾಳ ಹಾಗೂ ಇತರ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ SIR ನಡೆಸುವಂತೆ ಹೊರಡಿಸಲಾದ ಆದೇಶವನ್ನು ಆಯೋಗವು ಸರ್ವಾನುಮತದಿಂದ ಅನುಮೋದಿಸಿತ್ತು. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ ಎಂದು ತಿಳಿಸಿದೆ.
ಪ್ರಸ್ತುತ ಎಸ್‌ಐಆರ್‌ನಲ್ಲಿ ತಾರ್ಕಿಕ ವ್ಯತ್ಯಾಸಗಳ ಕುರಿತು ನೋಟಿಸ್ ಸ್ವೀಕರಿಸುವ ಮತದಾರರು ಸಾಮಾನ್ಯವಾಗಿ ಚುನಾವಣಾ ನೋಂದಣಿ ಅಧಿಕಾರಿ ಮುಂದೆ ಹಾಜರಾಗಬೇಕಾಗಿಲ್ಲ ಎಂದು ಆಯೋಗ ತಿಳಿಸಿದೆ. ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಬಳಿಕ ಆ ದಾಖಲೆಗಳನ್ನು ECINetನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಚುನಾವಣಾ ನೋಂದಣಿ ಅಧಿಕಾರಿ (ERO) ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಸಲಾಗುವುದು. ಸಾಧ್ಯವಾದಷ್ಟು ಆನ್‌ಲೈನ್ ಮೂಲಕವೇ ವಿಚಾರಣೆ ನಡೆಸಲು ಆದ್ಯತೆ ನೀಡಲಾಗುತ್ತದೆ. ಮತದಾರರ ಅನುಮತಿಯೊಂದಿಗೆ, ಅವರ ಪರವಾಗಿ ಕುಟುಂಬದ ವಯಸ್ಕ ಸದಸ್ಯರೂ ವಿಚಾರಣೆಗೆ ಹಾಜರಾಗಬಹುದು. ಆನ್‌ಲೈನ್ ವಿಚಾರಣೆಗಳ ಸೌಲಭ್ಯವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಆಶ್ರಯ ಕೇಂದ್ರಗಳಲ್ಲಿ ವಾಸಿಸುವವರು, ಕಾರ್ಮಿಕರು, ಬಡವರು ಹಾಗೂ ನಿರಾಶ್ರಿತರಿಗೆ ನೆರವಾಗಲು ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಸಹಾಯ ಕೇಂದ್ರಗಳು ಮತ್ತು ವಿಶೇಷ ಶಿಬಿರಗಳನ್ನು ಸ್ಥಾಪಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

