ಹೈದರಾಬಾದ್: ದಕ್ಷಿಣ ಭಾರತದಲ್ಲಿ ಸಕ್ರಿಯವಾಗಿದ್ದ ಸೈಬರ್ ವಂಚಕ ಜಾಲವನ್ನು ಬೆನ್ನುಹತ್ತಿದ ತೆಲಂಗಾಣ ಸೈಬರ್ ಭದ್ರತಾ ಬ್ಯುರೊ (ಟಿಜಿಸಿಎಸ್‌ಬಿ) ತಂಡವು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳಂ ಮತ್ತು ಪುದುಚೇರಿಯಲ್ಲಿ ಎರಡು ವಾರ ಕಾರ್ಯಾಚರಣೆ ನಡೆಸಿ 101 ಮಂದಿಯನ್ನು ಬಂಧಿಸಿದೆ.
ಬಂಧಿತರಲ್ಲಿ 18 ಮಂದಿ ಮಹಿಳೆಯರೂ ಇದ್ದಾರೆ. ಸುಮಾರು ₹17 ಕೋಟಿ ಮೊತ್ತದ ಸೈಬರ್ ಅಕ್ರಮ ನಡೆದಿರುವುದನ್ನು ತಂಡ ಪತ್ತೆ ಹಚ್ಚಿದೆ. 6 ವಿಶೇಷ ತಂಡಗಳು, 100 ಟಿಜಿಸಿಎಸ್‌ಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
'ಟಿಜಿಸಿಎಸ್‌ಬಿ'ನ 7 ಸೈಬರ್ ಅಪರಾಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 51 ಪ್ರಕರಣಗಳಿಗೆ ಸಂಬಂಧಿಸಿ ಬಂಧನ ನಡೆದಿದೆ. ದೇಶದೆಲ್ಲೆಡೆ ದಾಖಲಾದ ಒಟ್ಟು 1,172 ಪ್ರಕರಣಗಳ ಪೈಕಿ ತೆಲಂಗಾಣದಲ್ಲಿ 206 ಪ್ರಕರಣಗಳು ದಾಖಲಾಗಿವೆ. 101 ಮಂದಿ ಪೈಕಿ 50 ಮಂದಿ ತಲಾ ಐದು ಪ್ರಕರಣಗಳಲ್ಲಿ ಆರೋಪಿಗಾಳಿದ್ದಾರೆ.
ಕರ್ನಾಟಕದಲ್ಲಿ 17, ಕೇರಳದಲ್ಲಿ 35, ಆಂಧ್ರ ಪ್ರದೇಶದಲ್ಲಿ 22, ತಮಿಳುನಾಡಿನಲ್ಲಿ 14, ತೆಲಂಗಾಣದಲ್ಲಿ 12 ಮತ್ತು ಪುದುಚೇರಿಯಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಶೇ 82ರಷ್ಟು ಮಂದಿ 20ರಿಂದ 50 ವಯೋಮಾನದವರು. ವ್ಯಾಪಾರಸ್ಥರು ಅಥವಾ ಸ್ವಯಂ ಉದ್ಯೋಗ ನಡೆಸುತ್ತಿರುವವರು, ಖಾಸಗಿ ಕಂಪನಿ ಉದ್ಯೋಗಿಗಳು, ಮನೆವಾರ್ತೆ ನೋಡಿಕೊಳ್ಳುವ ಮಹಿಳೆಯರು, ಚಾಲಕ ವೃತ್ತಿ ನಡೆಸುವವರೂ ಬಂಧಿತರಲ್ಲಿ ಸೇರಿದ್ದಾರೆ. ಜೊತೆಗೆ, 10ನೇ ತರಗತಿ ಓದಿದವರು, ಬಿ.ಟೆಕ್ ವ್ಯಾಸಂಗ ಮಾಡಿದವರೂ ಇದ್ದಾರೆ.



