ಸೈಬೀರಿಯಾದಲ್ಲಿದ್ದ ಇರ್ಕುಟ್ಸ್ಕ್ ಆಂಟಿ-ಪ್ಲೇಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಶೋಧಕಿಯೊಬ್ಬರು ನ್ಯುಮೋನಿಕ್ ಪ್ಲೇಗ್‌ನಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 200 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸಂಶೋಧಕಿಯ ಸಾವಿನ ನಂತರ ರಷ್ಯಾದ ಆರೋಗ್ಯ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ.
28 ವರ್ಷದ ಸಂಶೋಧಕಿ ದಾರ್ಯಾ ಶಿಪಿಲೋವಾ ಅವರು ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಮಾದರಿಗಳನ್ನು ಪರೀಕ್ಷೆಗೆ ಸಂಗ್ರಹಿಸುವಾಗ ಜೀವಂತ ಬ್ಯಾಕ್ಟೀರಿಯಾ ಇದ್ದ ಟೆಸ್ಟ್ ಟ್ಯೂಬ್ ಆಕಸ್ಮಿಕವಾಗಿ ಒಡೆದುಹೋಯಿತು ಎಂದು ಅವರು ವೈದ್ಯಕೀಯ ಅಧಿಕಾರಿಗಳಿಗೆ ತಿಳಿಸಿದ್ದರು. ಆ ನಂತರ ಅವರು ಪ್ಲೇಗ್ ಸೋಂಕಿಗೆ ಒಳಗಾಗಿದ್ದಾರೆ. ಸೆಪ್ಟೆಂಬರ್ 29ರಂದು ನ್ಯುಮೋನಿಯಾ ರೋಗಲಕ್ಷಣಗಳು ಕಂಡುಬಂದಿದ್ದರಿಂದ ಅವರನ್ನು ಶೆಲೆಖೋವ್‌ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ ಅಕ್ಟೋಬರ್ 1 ರಂದು ಅವರು ನಿಧನರಾದರು ಎಂದು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮುನ್ನೆಚ್ಚರಿಕೆ ಕ್ರಮವಾಗಿ, ಅವರ ಸಂಪರ್ಕದಲ್ಲಿದ್ದ ಸುಮಾರು 200 ಜನರನ್ನು ಆರೋಗ್ಯ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ. ಪ್ರಸ್ತುತ ಅವರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಅವರ ಲ್ಯಾಬ್ ಪರೀಕ್ಷೆಗಳ ವರದಿ ನೆಗೆಟಿವ್ ಬಂದಿದೆ ಎಂದು ವರದಿಯಲ್ಲಿ ಹೇಳಿವೆ.
ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸುವ ರಷ್ಯಾದ 'ರೋಸ್ಪೊಟ್ರೆಬ್ನಾಡ್ರೊರ್' ಏಜೆನ್ಸಿಯ ಪ್ರಕಾರ, ನ್ಯುಮೋನಿಯಾದ ನಿಖರವಾದ ಮೂಲ ಇನ್ನೂ ತಿಳಿದುಬಂದಿಲ್ಲ. 'ಅಲ್ಲಿ ಏನಾಗಿದೆ ಎಂಬುದು ಸ್ಪಷ್ಟವಾಗಿಲ್ಲ' ಎಂದು ಸಿಎನ್‌ಎನ್ ವರದಿ ಮಾಡಿದೆ.
ಈ ಕುರಿತು ಮಾತನಾಡಿರುವ ರೋಸ್ಪೊಟ್ರೆಬ್ನಾಡ್ರೊರ್‌ನ ಮಾಜಿ ಮುಖ್ಯಸ್ಥ ಗೆನ್ನಡಿ ಒನಿಶ್ಚೆಂಕೊ, 'ಇರ್ಕುಟ್ಸ್ಕ್ ಪ್ರದೇಶದಲ್ಲಿ ಕಂಡುಬಂದಿರುವ ಸೋಂಕು ಪ್ಲೇಗ್ ಆಗಿರುವ ಸಾಧ್ಯತೆ ಕಡಿಮೆಯಿದೆ. ಒಂದು ವೇಳೆ ಪ್ಲೇಗ್ ಎಂದು ದೃಢಪಟ್ಟರೂ ಈ ರೋಗ ಹರಡುವುದಿಲ್ಲ. ಜತೆಗೆ, ಚಳಿಗಾಲದ ಆರಂಭವು ರೋಗ ಹರಡುವುದನ್ನು ತಡೆಯುತ್ತದೆ' ಎಂದು ಹೇಳಿದ್ದಾರೆ.
ನ್ಯುಮೋನಿಕ್ ಪ್ಲೇಗ್ ಎಂದರೆ ಏನು?
ಪ್ಲೇಗ್ ಎಂಬುದು 'ಯರ್ಸಿನಿಯಾ ಪೆಸ್ಟಿಸ್' ಎಂಬ ಬ್ಯಾಕ್ಟೀರಿಯಾದಿಂದ ಬರುವ ಸಾಂಕ್ರಾಮಿಕ ರೋಗವಾಗಿದೆ. ಇದು ಸಾಮಾನ್ಯವಾಗಿ ಸಣ್ಣ ಸಸ್ತನಿಗಳಲ್ಲಿ ಕಂಡುಬರುತ್ತದೆ. ಅವುಗಳ ಮೂಲಕ ಇದು ಪ್ರಾಣಿಗಳಲ್ಲಿ ಹರಡುತ್ತದೆ. ಮಾನವರಿಗೆ ಅವುಗಳು ಕಡಿಯುವ ಮೂಲಕ, ಸೋಂಕಿತ ದೇಹದ ದ್ರವಗಳ ಸಂಪರ್ಕಕ್ಕೆ ಬರುವುದರಿಂದ ಮತ್ತು ಸೋಂಕಿತ ರೋಗಿಯ ಉಸಿರಾಟವನ್ನು ಉಸಿರಾಡುವುದರಿಂದ (ನ್ಯುಮೋನಿಕ್ ಪ್ಲೇಗ್) ರೋಗ ಹರಡುತ್ತದೆ.
ನ್ಯುಮೋನಿಕ್ ಪ್ಲೇಗ್ ಅತ್ಯಂತ ಅಪಾಯಕಾರಿ ಮತ್ತು ಮಾರಕವಾದ ಪ್ಲೇಗ್ ರೂಪವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡುವುದರೊಂದಿಗೆ, ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಸೂಕ್ತ ಚಿಕಿತ್ಸೆ ನೀಡದಿದ್ದರೆ ನ್ಯುಮೋನಿಕ್ ಪ್ಲೇಗ್‌ನ ಮರಣ ಪ್ರಮಾಣ ಶೇ 30ರಿಂದ 100ರಷ್ಟಿರುತ್ತದೆ. ಹಾಗಾಗಿ ಇದನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಕರೆಯಲಾಗುತ್ತದೆ.
ಸೋಂಕು ತಗಲಿದ ತಕ್ಷಣ (ಕೆಲವೊಮ್ಮೆ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ) ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉಸಿರಾಟದ ತೊಂದರೆಯು ಇದರ ಪ್ರಮುಖ ಲಕ್ಷಣಗಳಾಗಿದೆ. ರೋಗಿಗಳಲ್ಲಿ ಉಸಿರಾಟದ ವೈಫಲ್ಯ, ಸೆಪ್ಟಿಕ್ ಶಾಕ್ ಉಂಟಾಗಿ 24 ರಿಂದ 48 ಗಂಟೆಗಳ ಒಳಗೆ ಸಾವು ಸಂಭವಿಸಬಹುದು.
ನ್ಯುಮೋನಿಕ್ ಪ್ಲೇಗ್‌ಗೆ ಚಿಕಿತ್ಸೆ ಇದೆಯೇ?
ನ್ಯುಮೋನಿಕ್ ಪ್ಲೇಗ್‌ಗೆ ಚಿಕಿತ್ಸೆ ನೀಡದಿದ್ದರೆ ಅದು ವೇಗವಾಗಿ ಪ್ರಾಣಾಪಾಯ ಉಂಟುಮಾಡುತ್ತದೆ. ಆದ್ದರಿಂದ ರೋಗಿಯನ್ನು ಬದುಕಿಸಲು ಮತ್ತು ಮುಂದಾಗುವ ತೊಂದರೆಯನ್ನು ಕಡಿಮೆ ಮಾಡಲು ಆರಂಭಿಕ ಹಂತದಲ್ಲಿ ಚಿಕಿತ್ಸೆ ಅತ್ಯಗತ್ಯವಾಗಿದೆ. ರೋಗಲಕ್ಷಣಗಳು ಕಂಡುಬಂದ 24 ಗಂಟೆಗಳ ಒಳಗೆ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ವೈದ್ಯಕೀಯ ತಜ್ಞರ ಪ್ರಕಾರ, ಸುಲಭವಾಗಿ ದೊರೆಯುವ ಸ್ಟ್ರೆಪ್ಟೊಮೈಸಿನ್, ಜೆಂಟಾಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಮತ್ತು ಡಾಕ್ಸಿಸೈಕ್ಲಿನ್‌ನಂತಹ ಆಂಟಿಬಯೋಟಿಕ್‌ಗಳು ಈ ಬ್ಯಾಕ್ಟೀರಿಯಾದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

