ಕುಂಬಡಾಜೆ: ಕ್ಷಯರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಕುಂಬಡಾಜೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಉಚಿತ ಹ್ಯಾಂಡ್‌ಹೆಲ್ಡ್ ಎದೆ ಎಕ್ಸ್‌ರೇ ತಪಾಸಣಾ ಶಿಬಿರ ನಡೆಯಿತು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಕುಟುಂಬ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಎನ್. ಶಿಬಿರವನ್ನು ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯತ್ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡಾ ಹಾಗೂ ಸದಸ್ಯೆ ಸೌಭಾಗ್ಯಲಕ್ಷ್ಮಿ ಮಾತನಾಡಿದರು. ವೈದ್ಯಾಧಿಕಾರಿ ಡಾ. ಸಯ್ಯದ್ ಹಾಮಿದ್ ಶುಹೈಬ್ ಕ್ಷಯರೋಗದ ಲಕ್ಷಣಗಳು, ಪತ್ತೆ ಹಾಗೂ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಕ ಸುರೇಶ್ ಕುಮಾರ್ ಸ್ವಾಗತಿಸಿ, ಶಿಬಿರದ ಮಹತ್ವ ವಿವರಿಸಿದರು.
ರೇಡಿಯೋಗ್ರಾಫರ್ ಶರತ್, ಧನ್ಯ ಹಾಗೂ ಡೇಟಾ ಮ್ಯಾನೇಜರ್ ಸೂರ್ಯ ಶಿಬಿರದ ನೇತೃತ್ವ ವಹಿಸಿದ್ದರು. ಒಟ್ಟು 70 ಮಂದಿ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದರು. ಸಾರ್ವಜನಿಕ ಆರೋಗ್ಯ ಶುಶ್ರೂಷಕಿ ಉಷಾ ವಂದಿಸಿದರು.



