ನವದೆಹಲಿ: ನಗರದ ಕನ್ನಾಟ್ ಪ್ಲೇಸ್ ಪ್ರದೇಶದ ಹೋಟೆಲ್ ಲಲಿತ್ ನಿಂದ ಸಂಗ್ರಹಿಸಲಾದ ನೆಸ್ಲೆ ಇಂಡಿಯಾ ಕಂಪೆನಿಯ 'ಕಡಿಮೆ ಕೊಬ್ಬಿನಾಂಶದ ಡೈರಿ ವೈಟ್ನರ್' ಮಾದರಿಯು 'ಅಸುರಕ್ಷಿತ ಹಾಗೂ ಕಳಪೆ' ಗುಣಮಟ್ಟದ್ದಾಗಿದೆ ಎಂದು ಕಂಡುಬಂದಿರುವುದಾಗಿ ಭಾರತೀಯ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರ (FSSAI) ಶನಿವಾರ ತಿಳಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಾಧಿಕಾರವು, ಮೆ. ಭಾರತ್ ಹೋಟೆಲ್ಸ್ ಲಿಮಿಟೆಡ್ (ದಿ ಲಲಿತ್)ನಿಂದ ಸಂಗ್ರಹಿಸಲಾದ 'ಕಡಿಮೆ ಕೊಬ್ಬಿನಾಂಶದ ಡೈರಿ ವೈಟ್ನರ್'ನ ಮಾದರಿಯು 2006ರ FSS ಕಾಯ್ದೆಯಡಿ ಅಸುರಕ್ಷಿತ ಹಾಗೂ ಕಳಪೆ ಗುಣಮಟ್ಟದ್ದೆಂದು ಆಹಾರ ವಿಶ್ಲೇಷಕರ ಪ್ರಯೋಗಾಲಯದ ವಿಶ್ಲೇಷಣೆಯಲ್ಲಿ ದೃಢಪಟ್ಟಿರುವುದಾಗಿ ಆಹಾರ ವಿಶ್ಲೇಷಣಾ ವರದಿಗಳು ತಿಳಿಸಿವೆ.
ಪ್ರಯೋಗಾಲಯದ ವರದಿಯನ್ನು ಪರಿಶೀಲನೆಗೆ ಹಾಗೂ ಸೂಕ್ತ ಕ್ರಮಕ್ಕಾಗಿ ಆಹಾರ ಉದ್ಯಮ ನಿರ್ವಹಣಾ (FBO) ಸಂಸ್ಥೆಗೆ ಸಲ್ಲಿಸಲಾಗಿದೆ ಎಂದು ಆಹಾರ ಸುರಕ್ಷತಾ ನಿಯಂತ್ರಣ ಸಂಸ್ಥೆಯಾದ FSSAI ತಿಳಿಸಿದೆ. ಉತ್ಪನ್ನಕ್ಕೆ ಸಂಬಂಧಿಸಿದ ಗುಣಮಟ್ಟದ ನಿಯಮಗಳನ್ನು ಪಾಲಿಸದ ಆರೋಪಕ್ಕೆ ಸಂಬಂಧಿಸಿ ಭಾರತ್ ಹೋಟೆಲ್ಸ್ ಲಿಮಿಟೆಡ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಲಾಗಿದೆ ಹಾಗೂ ಈ ಉತ್ಪನ್ನವನ್ನು ಮಾರಾಟ ಮಾಡದಂತೆ ನಿರ್ದೇಶನ ನೀಡಲಾಗಿದೆ.
ಆಹಾರ ವಿಶ್ಲೇಷಕರ ವರದಿಯ ವಿರುದ್ಧ ಸೂಚಿಸಲಾದ ಅವಧಿಯೊಳಗೆ 2006ರ ಆಹಾರ ಸುರಕ್ಷತಾ ಕಾಯ್ದೆಯ ಅನುಸಾರವಾಗಿ ಮೇಲ್ಮನವಿ ಸಲ್ಲಿಸಲು FBOಗೆ ಅವಕಾಶ ನೀಡಲಾಗಿದೆ. ಗುರುತಿಸಲಾದ ಅಸುರಕ್ಷಿತ ಆಹಾರ ಉತ್ಪನ್ನದ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ FBOಗೆ ನಿರ್ದೇಶನ ನೀಡಲಾಗಿದೆ.

