ಮಂಜೇಶ್ವರ: ರಮೇಶ್ ಚೆನ್ನಿತ್ತಲ ಅವರು ಗೃಹ ಸಚಿವರಾಗಿದ್ದ ಕಾಲದಲ್ಲಿ 'ಆಪರೇಷನ್ ಕುಬೇರ'ದ ಮೂಲಕ ಸ್ಥಳೀಯ ಬ್ಲೇಡ್ ಮಾಫಿಯಾವನ್ನು ಮಟ್ಟಹಾಕಲಾಗಿತ್ತು. ಆದರೆ ಇಂದು ಅದರ ಜಾಗದಲ್ಲಿ ಆನ್‍ಲೈನ್ ಮತ್ತು ಮೊಬೈಲ್ ಲೋನ್ ಆಪ್‍ಗಳ ರೂಪದಲ್ಲಿ ಹೊಸ ವಂಚಕ ಜಾಲ ತಲೆಯೆತ್ತಿದೆ. ಬ್ಯಾಂಕಿಂಗ್ ಸಂಸ್ಥೆಗಳು ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಸಾಲ ನಿರಾಕರಿಸುವ ನಕಾರಾತ್ಮಕ ಧೋರಣೆಯೇ ಜನಸಾಮಾನ್ಯರು ಇಂತಹ ಆಪತ್ತಿಗೆ ಸಿಲುಕಲು ಪ್ರಮುಖ ಕಾರಣ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಕಳವಳ ವ್ಯಕ್ತಪಡಿಸಿದರು.
ಮೀಂಜ ಗ್ರಾಮ ಪಂಚಾಯತಿ ಕುಟುಂಬಶ್ರೀ ಮಾಡೆಲ್ ಸಿಡಿಎಸ್ ಹಾಗೂ ಕೇರಳ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ (ಕೆ.ಎಸ್.ಬಿ.ಸಿ.ಡಿ.ಸಿ) ಕಾಸರಗೋಡು ಜಿಲ್ಲಾ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮೈಕ್ರೋ ಕ್ರೆಡಿಟ್ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸಂಕಷ್ಟದಲ್ಲಿ ಬರುವ ಸಾಮಾನ್ಯ ಜನರ ಅರ್ಜಿಗಳನ್ನು ಬ್ಯಾಂಕುಗಳು ಮಾನವೀಯ ಹಾಗೂ ಸಹಾನುಭೂತಿಯ ನೆಲೆಯಲ್ಲಿ ಪರಿಶೀಲಿಸಬೇಕು. ಸಾಂಸ್ಥಿಕ ಸಾಲ ಸೌಲಭ್ಯಗಳು ಕೈತಪ್ಪಿದಾಗ ಅನಿವಾರ್ಯವಾಗಿ ಜನರು ಇಂತಹ ಅಕ್ರಮ ಲೇವಾದೇವಿದಾರರ ಬಲೆಗೆ ಬೀಳುತ್ತಾರೆ. ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವಲ್ಲಿ ಅಧಿಕೃತ ಹಣಕಾಸು ಸಂಸ್ಥೆಗಳು ಜವಾಬ್ದಾರಿಯುತ ಪಾತ್ರ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಮಹಿಳೆಯರ ಸ್ವಾವಲಂಬನೆ, ಸಬಲೀಕರಣ ಹಾಗೂ ಉದ್ಯಮಶೀಲತೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸಮಾರಂಭದಲ್ಲಿ ಕುಟುಂಬಶ್ರೀ ಸದಸ್ಯರಿಗೆ ರಿಯಾಯಿತಿ ಬಡ್ಡಿದರದಲ್ಲಿ ಒಟ್ಟು 2.44 ಕೋಟಿ ರೂ. ಮೌಲ್ಯದ ಸಾಲದ ಚೆಕ್ ಗಳನ್ನು ವಿತರಿಸಲಾಯಿತು.
ಮೀಯಪದವು ಚೌಟರ ಚಾವಡಿಯಲ್ಲಿ ಜರುಗಿದ ಸಮಾರಂಭದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎ. ತಾಜುದ್ದೀನ್ ವಹಿಸಿದ್ದರು. ಕೇರಳ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಾಸರಗೋಡು ಜಿಲ್ಲಾ ವ್ಯವಸ್ಥಾಪಕ ಎನ್.ಎಂ. ಮೋಹನನ್ ಸಾಲ ಯೋಜನೆಯ ವಿವರ ಹಾಗೂ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಉಷಾ ಪುಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಲೀಂ ಎಂ.ಎ, ಸೌಮ್ಯ ಕೆ, ಕೃಷ್ಣ ಕೆ, ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶಾಂತಕುಮಾರಿ, ಸಿದ್ಧಿಕ್, ಮೋಹನ್‍ದಾಸ್ ಶೆಟ್ಟಿ, ಶಾಲಿನಿ ಬಿ. ಶೆಟ್ಟಿ, ಮೊಹಮ್ಮದ್ ಶರೀಫ್, ಮಿಸ್ರಿಯಾ ಎಂ. ಕುಂಞÂ, ಶರ್ಮಿಳಾ ಎಂ. ಶೆಟ್ಟಿ, ಆಶಾಲತಾ, ಲತೀಶ್, ಸಂಧ್ಯಾ ಬಿ, ಸುನಿಲ್‍ಕುಮಾರ್ ಎಂ, ಬೀಫಾತಿಮಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೀಂಜ ಸಿಡಿಎಸ್ ಅಧ್ಯಕ್ಷೆ ಪದ್ಮಜಾ ಇ. ಸ್ವಾಗತಿಸಿ, ಕಾರ್ಯದರ್ಶಿ ನಾರಾಯಣ ಕೆ. ವಂದಿಸಿದರು.

.jpg)
.jpg)
.jpg)
