ಮುಂಬೈ: ಭಾರತದ ಜನ ತಮ್ಮ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ಸಮಾಜ ಮತ್ತು ಜಗತ್ತಿನ ಒಳಿತಿಗಾಗಿ ಶ್ರಮಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪ್ರತಿಯೊಬ್ಬರಿಗೂ ತೃಪ್ತಿಕರ ಜೀವನ ದೊರಕಿಸಿಕೊಡುವ ದೃಷ್ಟಿಯಿಂದ ಎಲ್ಲರೂ ಕೊಡುಗೆ ನೀಡಬೇಕು ಎಂದಿದ್ದಾರೆ.
ಅಶೋಕ್ ಸಿಂಘಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಾಗ್ಪುರ ಜಿಲ್ಲೆಯ ದೇವೋಲಾಪುರದಲ್ಲಿ ಹಲವು ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸಮಾಜ ಮತ್ತು ಜಗತ್ತಿನ ಸುರಕ್ಷತೆ ಹಾಗೂ ಕಲ್ಯಾಣವನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಭಾರತದ ಸಂಪ್ರದಾಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ.
'ಜೀವನ, ಸಮಾಜ, ಧರ್ಮದ ಸುರಕ್ಷತೆ ಹಾಗೂ ಜಗತ್ತಿನ ಒಳಿತಿಗಾಗಿ ಸಂಪ್ರದಾಯ ಪಾಲಿಸಬೇಕಿದೆ. ಆ ಮೂಲಕ ಬದುಕನ್ನು ಯಶಸ್ವಿಗೊಳಿಸಬೇಕಿದೆ. ಪ್ರತಿಯೊಬ್ಬರೂ ತೃಪ್ತಿದಾಯಕ ಜೀವನ ನಡೆಸುವಂತಾಗಲು ಎಲ್ಲರೂ ಕೊಡುಗೆ ನೀಡಬೇಕು' ಎಂದಿದ್ದಾರೆ.
ಸಮಾಜಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಇಷ್ಟು ದೊಡ್ಡ ಸಮಾಜದಲ್ಲಿ ಕೆಲವರು ಮಾತ್ರ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಸಾಕಾಗುವುದಿಲ್ಲ ಎಂದಿದ್ದಾರೆ.
'ನಮ್ಮ ಸಮಾಜವು ಹಬ್ಬಗಳ ಆಚರಣೆಯನ್ನು ಇಷ್ಟಪಡುತ್ತದೆ. ನಾವು ಅವುಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತೇವೆ. ಆದರೆ, ಸಮಾಜಕ್ಕಾಗಿ ಏನು ಮಾಡಬೇಕೆಂದು ಯಾರೂ ಯೋಚಿಸುವುದಿಲ್ಲ. ನಮ್ಮದೇ ಕೆಲಸ ಇದೆ. ಕುಟುಂಬದ ಪೋಷಣೆಯ ಹೊಣೆ ಇದೆ ಎಂದು ಜಾರಿಕೊಳ್ಳುತ್ತೇವೆ. ಬೇರೆ ಯಾರೋ ಸಮಾಜಕ್ಕಾಗಿ ದುಡಿಯಲಿ ಎಂದು ನಿರೀಕ್ಷಿಸುತ್ತೇವೆ' ಎಂದು ಭಾಗವತ್ ಹೇಳಿದ್ದಾರೆ.
ಏನಾದರೊಂದು ಒಳಿತಾದರೆ, ಅದು ಇಡೀ ಸಮಾಜದ ಕೊಡುಗೆಯನ್ನು ಬಿಂಬಿಸುತ್ತದೆ. ಒಳ್ಳೆಯ ಕೆಲಸ ಮಾಡುವ ಮೂಲಕ ನಾವು ಸಮಾಜಕ್ಕೆ ಕೊಡುಗೆ ನೀಡಿದ ಒಳ್ಳೆಯ ಜನರನ್ನು ನೆನಪಿಸಿಕೊಳ್ಳಬಹುದು ಎಂದಿದ್ದಾರೆ.
ಸಮಾಜಕ್ಕಾಗಿ ತಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡುವ ಜನರು, ಇತರರಿಗೆ ಸ್ಫೂರ್ತಿಯಾಗುತ್ತಾರೆ ಎಂದು ಭಾಗವತ್ ಹೇಳಿದ್ದಾರೆ.



