ಕಾಸರಗೋಡು: ಬಿಜೆಪಿ ರಾಷ್ಟ್ರೀಯ ನಿರ್ವಾಹಕ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹಾಗೂ ಬಿಜೆಪಿ ರಾಜ್ಯ ಕಚೇರಿಯಾದ ಮಾರಾರ್ಜಿ ಭವನದ ಮೇಲೆ ನಡೆದ ದಾಳಿಯನ್ನು ಪ್ರತಿಭಟಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ ಮೆರವಣಿಗೆ ಉದ್ಘಾಟಿಸಿ ಮಾತನಾಡಿ, ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವರಿಗೂ ಕೂಡ ಸುರಕ್ಷತೆ ಖಚಿತಪಡಿಸಲು ಸಾಧ್ಯವಾಗದ ಗೃಹ ಖಾತೆ ಸಚಿವರು ಆ ಸ್ಥಾನದಲ್ಲಿರಲು ಅರ್ಹರಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ದಾಂಧಲೆ, ಗೂಂಡಾಗಿರಿಯಲ್ಲಿ ತೊಡಗಿಸಿಕೊಳ್ಳುವ ತನ್ನ ಕಾರ್ಯಕರ್ತರನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗದ ಐಕ್ಯರಂಗದ ಆಡಳಿತ ಸಂಪೂರ್ಣ ಪರಾಭವಗೊಂಡಿದೆ. ಆಡಳಿತದಲ್ಲಿನ ತನ್ನ ವೈಫಲ್ಯ ಮರೆಮಾಚಲು ಹಾಗೂ ರಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಒಕ್ಕೂಟ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಹಿಂಸಾಚಾರದ ಮಾರ್ಗ ಅನುಸರಿಸುತ್ತಿರುವುದಾಗಿ ದೂರಿದರು. ದೂರಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರ, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಪ್ರಶಾಂತ ಗೋಪಾಲನ್, ಪ್ರಮಿಳಾ ಮಜಲ್, ಸಂಜೀವ ಪುಳ್ಕೂರು ಮೊದಲಾದವರು ಪಾಲ್ಗೊಂಡಿದ್ದರು.


