ನವದೆಹಲಿ: ಭಾರತದಲ್ಲಿ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಉಪಗ್ರಹ ಸಂವಹನ ಸೇವೆಗಳ ಕುರಿತು ವಿವಾದ ನಡೆಯುತ್ತಿರುವ ಬೆನ್ನಲ್ಲೇ, 'ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ದೇಶದ ನಿಜವಾದ ಒಡೆಯರೇ' ಎಂದು ಮಸ್ಕ್ ಪ್ರಶ್ನಿಸಿದ್ದಾರೆ.
ತಮ್ಮ ಸ್ಟಾರ್‌ಲಿಂಕ್ ಕಂಪನಿಯ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಭಾರತದ ಉದ್ಯಮ ಹಿತಾಸಕ್ತಿಗಳು ತಡೆಹಿಡಿದಿವೆ ಎಂದು ಮಸ್ಕ್ ಆರೋಪಿಸಿದ್ದಾರೆ.
'ಭಾರತದ ನಿಜವಾದ ಬಾಸ್ ಅಂಬಾನಿ ಅವರೇ' ಎಂದು ಪ್ರಶ್ನಿಸಿರುವ ಮಸ್ಕ್, '165 ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟಾರ್‌ಲಿಂಕ್‌ಗೆ ಪರವಾನಗಿ ಇದೆ. ಭಾರತದ ಸರ್ಕಾರ ಹೇಳಿದ ಎಲ್ಲ ಕಾನೂನುಗಳನ್ನು ಪಾಲಿಸಲು ಐದು ವರ್ಷ ವಿನಿಯೋಗಿಸಿದೆ. ಹೀಗಿರುವಾಗ ಪರವಾನಗಿ ಏಕಿಲ್ಲ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಕೆಲವು ಶ್ರೀಮಂತ ವ್ಯಕ್ತಿಗಳು ಏಕಸ್ವಾಮ್ಯದ ಹಿಡಿತವನ್ನು ರಕ್ಷಿಸಿಕೊಳ್ಳಲು ಸ್ಟಾರ್‌ಲಿಂಕ್ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೂಡ ಮಸ್ಕ್ ಆರೋಪಿಸಿದ್ದರು. ಆದರೆ, ಅವರು ಯಾವುದೇ ವ್ಯಕ್ತಿ, ಕಂಪನಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ. 'ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಯು ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯವನ್ನು ಈಗಿನ ಶುಲ್ಕವನ್ನು ಪಾವತಿಸಲು ಆಗದವರಿಗೆ, ಇಂಟರ್ನೆಟ್ ಸಂಪರ್ಕವೇ ಇಲ್ಲದವರಿಗೆ ಕಡಿಮೆ ವೆಚ್ಚದಲ್ಲಿ ಒದಗಿಸಬಹುದು' ಎಂಬುದು ಮಸ್ಕ್ ಅವರ ಮಾತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮಸ್ಕ್ ಪೋಸ್ಟ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, 'ಭಾರತಕ್ಕೆ ಸ್ವಾಗತ ಎಲಾನ್. ಇನ್ನೊಬ್ಬ ವ್ಯಕ್ತಿಯ ಬಗ್ಗೆ ತಿಳಿಯುವವರೆಗೆ ನೀವು ಕಾಯಬೇಕು' ಎಂದಿದ್ದಾರೆ. ಇದೀಗ ರಾಹುಲ್ ಗಾಂಧಿ ಅವರ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.



