ದುಬೈ (AP): ಪಶ್ಚಿಮ ಏಷ್ಯಾ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್ ಸಲ್ಲಿಸಿದ್ದ ಪ್ರಸ್ತಾವಕ್ಕೆ ಅಮೆರಿಕದಿಂದ ಅಧಿಕೃತ ಪ್ರತಿಕ್ರಿಯೆ ಲಭಿಸಿದೆ ಎಂದು ಮೂಲಗಳು ಹೇಳಿವೆ. ಆದರೆ, ಇರಾನ್ ಪ್ರಸ್ತಾವವನ್ನು ಅಮೆರಿಕ ಒಪ್ಪಿಕೊಂಡಿದೆಯೇ ಅಥವಾ ತಿರಸ್ಕರಿಸಿದೆಯೇ ಎನ್ನುವ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.
ಅಮೆರಿಕ-ಇರಾನ್ ನಡುವೆ 7 ತಿಂಗಳಿಂದ ಮುಂದುವರಿದಿರುವ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್ ಸಲ್ಲಿಸಿದ್ದ ಪ್ರಸ್ತಾವವನ್ನು ಕೆಲವು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ತಳ್ಳಿಹಾಕಿದ್ದರು. ಹೊರ್ಮುಜ್ ಜಲಸಂಧಿಯ ಬದಲು ಪರ್ಯಾಯ ಮಾರ್ಗಗಳಲ್ಲಿ ತೈಲ ಮತ್ತು ಇಂಧನ ರಫ್ತು ಯುದ್ಧಪೂರ್ವದ ಸಹಜ ಸ್ಥಿತಿಗೆ ಮರಳಿದ ಬೆನ್ನಲ್ಲೇ, ಅಮೆರಿಕದಿಂದ ಈ ಪ್ರತಿಕ್ರಿಯೆ ಹೊರಬಿದ್ದಿತ್ತು.
ಇಸ್ರೇಲ್ ದಾಳಿ: ಐವರು ಪ್ಯಾಲಿಸ್ಟೀನಿಯರ ಸಾವು
ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಐವರು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ.
ಗಾಜಾಪಟ್ಟಿಯಲ್ಲಿ ಸಂಘರ್ಷ ಕೊನೆಗೊಳಿಸುವುದಕ್ಕೆ ಸಂಬಂಧಿಸಿ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ವರ್ಷದ ಹಿಂದೆ ಕದನ ವಿರಾಮ ಏರ್ಪಟ್ಟಿತ್ತು. ಕದನ ವಿರಾಮ ಘೋಷಣೆಯಾದ ನಂತರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಇದುವರೆಗೆ 1,400ಕ್ಕೂ ಹೆಚ್ಚು ಪ್ಯಾಲಿಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ಹೇಳಿದೆ. ಗುರುವಾರ ನಡೆದ ದಾಳಿಯ ಬಗ್ಗೆ ಇಸ್ರೇಲ್ ಸೇನೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇರಾಕ್‌ನಿಂದ ಅಮೆರಿಕ ಸೇನೆ ವಾಪಸ್
'ಇರಾಕ್ ವಿರುದ್ಧದ 12 ವರ್ಷಗಳ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದ್ದು ಅಲ್ಲಿಂದ ಸೇನೆಯನ್ನು ಪೂರ್ಣವಾಗಿ ವಾಪಸ್ ಕರೆಯಿಸಿಕೊಳ್ಳಲಾಗಿದೆ' ಎಂದು ಅಮೆರಿಕದ ಸೇನೆ ಹೇಳಿದೆ. ಇರಾಕ್‌ನಿಂದ ಸೇನೆ ಹಿಂತೆಗೆದುಕೊಳ್ಳುವಿಕೆಯನ್ನು ಶ್ಲಾಘಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಕೆಟ್ಟ ನಿರ್ಧಾರದಿಂದ ನಾವು ಬಹಳ ಸಮಯದಿಂದ ಈ ಸಂಕಷ್ಟಕ್ಕೆ ಸಿಲುಕಿದ್ದೆವು. ಆದರೆ ಈಗ ಇದು ಇತಿಹಾಸದ ಭಾಗವಾಗಲಿದೆ' ಎಂದು ಹೇಳಿದ್ದಾರೆ.

