ದುಬೈ: ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ 'ಫ್ಲೈದುಬೈ' ವಿಮಾನಯಾನ ಸಂಸ್ಥೆಯ ಶಂಕಿತ ಪೈಲಟ್‌ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಹಸ್ತಾಂತರಿಸಲಾಗಿದೆ ಎಂದು ಸೌದಿ ಅರೇಬಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿಮಾನದಲ್ಲಿದ್ದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ಶಂಕಿತ ಆರೋಪಿಯ ಕೃತ್ಯವನ್ನು ವಿಫಲಗೊಳಿಸಿದ್ದರು.
'ವಿಮಾನದ ಕ್ಯಾಪ್ಟನ್ ಹಾಗೂ ಸಹ ಪೈಲಟ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ, ವೈದ್ಯಕೀಯ ತಂಡದ ಪರಿಶೀಲನೆಯ ಬಳಿಕ ಇಬ್ಬರನ್ನೂ ಸೌದಿಯಿಂದ ಅಬುಧಾಬಿಗೆ ಸ್ಥಳಾಂತರಿಸಲಾಗಿದೆ. ಎಮಿರೇಟ್ಸ್ ಭದ್ರತಾ ಸಿಬ್ಬಂದಿಯ ಕಾವಲಿನಲ್ಲಿ ಇಬ್ಬರನ್ನೂ ರವಾನಿಸಲಾಗಿದೆ' ಎಂದು ಸಚಿವಾಲಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಸಹ ಪೈಲಟ್ ವಿಮಾನದ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ಇರಾನ್ ಜೊತೆ ನಂಟು ಶಂಕೆ, ಕಾರಣ ಇನ್ನೂ ನಿಗೂಢ
ಇಸ್ರೇಲ್‌ಗೆ ಸಂಚರಿಸುತ್ತಿದ್ದ ವಿಮಾನವನ್ನು ಪತನಗೊಳಿಸುವ ಪ್ರಯತ್ನದ ಹಿಂದಿನ ಉದ್ದೇಶ ಇನ್ನೂ ತಿಳಿದು ಬಂದಿಲ್ಲ. ಒಮಾನ್ ಮೂಲದ ಸಹ ಪೈಲಟ್‌ನ ಪೂರ್ಣ ವಿವರವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಏತನ್ಮಧ್ಯೆ ಫ್ಲೈದುಬೈ ಸಹ ಪೈಲಟ್‌ಗೆ ಇರಾನ್ ಜೊತೆಗೆ ಇರಾನ್ ಜೊತೆಗೆ ನಂಟು ಇರುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಂಕಿಸಿದ್ದಾರೆ.

