ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು ತಾಲೂಕಿನ ಕಾರಡ್ಕ ಮತ್ತು ಮುಳ್ಳೇರಿಯ ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಗಾರ ಕುಂಟಾರು ಅರ್ಪಣ ಹಾಲ್‍ನಲ್ಲಿ ನಡೆಯಿತು. ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ದಿನೇಶ್ ಅವರು ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಯೋಜನೆಯ ಹಿನ್ನೆಲೆ, ಯೋಜನೆಯು ನಡೆದು ಬಂದ ದಾರಿ, ಯೋಜನೆಯಲ್ಲಿನ ಕಾರ್ಯಕ್ರಮಗಳು, ಗ್ರಾಮೀಣ ಜನರ ಅಭಿವೃದ್ಧಿಗೆ ಯೋಜನೆಯ ಕಾರ್ಯಕ್ರಮವು ಯಾವ ರೀತಿ ಸಹಕಾರಿಯಾಗಿದೆ ಎಂದು ಸವಿವರವಾಗಿ ತಿಳಿಸಿದರು. ಯೋಜನೆಯಲ್ಲಿ ಇರುವ ವಿವಿಧ ವಿಮೆಗಳ ಬಗ್ಗೆ ಮಾಹಿತಿ, ಸಂಘಗಳ ಮೂಲಕ ಬ್ಯಾಂಕಿನಿಂದ ಪಡೆಯುವ ಸಾಲಗಳಿಗೆ ವಿಧಿಸಲಾಗುವ ಬಡ್ಡಿ ದರಗಳ ಮಾಹಿತಿ ಹಾಗೂ ಸಿಎಸ್‍ಸಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಮುಳ್ಳೇರಿಯ ಕಾರಡ್ಕ ವಲಯದ ನೂತನ ವಲಯಾಧ್ಯಕ್ಷರಾಗಿ ಉದಯ ಕುಮಾರ್ ದೇಲಂಪಾಡಿ ಅವರನ್ನು ಆಯ್ಕೆ ಮಾಡಲಾಯಿತು. ದೇಲಂಪಾಡಿ, ಅಡೂರು, ಕುಂಟಾರು, ಮುಳ್ಳೇರಿಯ, ಮಣಿಯೂರು, ಮವ್ವಾರು, ಬೆಳ್ಳೂರು, ಗಾಡಿಗುಡ್ಡೆ, ಕಿನ್ನಿಂಗಾರು, ಕಾಯರ್‍ಪದವು, ಮಾಳಂಗಾಯಿ, ಮಾರ್ಪನಡ್ಕ ಒಕ್ಕೂಟಗಳ ಪದಾಧಿಕಾರಿಗಳು ಹಾಜರಿದ್ದರು. ತರಬೇತಿಯಲ್ಲಿ ಕೃಷಿ ಮೇಲ್ವಿಚಾರಕ ರಮೇಶ್, ತಾಲೂಕು ನೋಡಲ್ ಅಧಿಕಾರಿ ರಾಜೇಂದ್ರ, ಲೆಕ್ಕ ಪರಿಶೋಧಕ ಮೋನಪ್ಪ, ಸೇವಾ ಪ್ರತಿನಿಧಿಗಳಾದ ಜಯಲಕ್ಷ್ಮಿ, ರಾಜೇಶ್ವರಿ, ಕುಸುಮ, ಕಮಲಾಕ್ಷಿ, ಪುಷ್ಪಲತಾ, ಗೌತಮಿ ಉಪಸ್ಥಿತರಿದ್ದರು. ಶಶಿಕಲಾ ಸ್ವಾಗತಿಸಿ, ರೇಣುಕಾ ವಂದಿಸಿದರು. ಮೇಲ್ವಿಚಾರಕ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.

.jpg)
