ಭುವನೇಶ್ವರ: ಒಡಿಶಾದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (CEO) ಆರ್.ಎಸ್. ಗೋಪಾಲನ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ (VRS) ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
1968ರಲ್ಲಿ ಜನಿಸಿದ ಮತ್ತು 2001ರ ಬ್ಯಾಚ್‌ನ IAS ಅಧಿಕಾರಿಯಾಗಿರುವ ಗೋಪಾಲನ್ ಅವರು ಬುಧವಾರ (ಸೆ.30) VRSಗೆ ಅರ್ಜಿ ಸಲ್ಲಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದು, ತಮ್ಮ VRS ಅರ್ಜಿಗೂ SIR ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೇವಾವಧಿ ಪೂರ್ಣಗೊಳ್ಳಲು ಇನ್ನೂ ಸುಮಾರು ಒಂದೂವರೆ ವರ್ಷ ಬಾಕಿ ಇರುವಾಗಲೇ ಗೋಪಾಲನ್ ಅವರು VRSಗೆ ಅರ್ಜಿ ಸಲ್ಲಿಸಿದ್ದಾರೆ. ಒಡಿಶಾದಲ್ಲಿ ನಡೆದ SIR ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಅವರೇ ನಡೆಸಿದ್ದರು.
'ಇತರ ರಾಜ್ಯಗಳಿಗೆ ಹೋಲಿಸಿದರೆ ಒಡಿಶಾದಲ್ಲಿ SIR ಪ್ರಕ್ರಿಯೆ ಕಡಿಮೆ ವಿವಾದಾಸ್ಪದವಾಗಿತ್ತು' ಎಂದು ಗೋಪಾಲನ್ ಹೇಳಿದ್ದಾರೆ. ಆದರೂ, ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಬಿಜು ಜನತಾ ದಳ (BJD) ಹಲವು ಮನವಿಗಳನ್ನು ಸಲ್ಲಿಸಿತ್ತು.
ಒಡಿಶಾದ ಅಂತಿಮ ಮತದಾರರ ಪಟ್ಟಿಯನ್ನು ಸೆ.21ರಂದು ಪ್ರಕಟಿಸಲಾಗಿತ್ತು. SIR ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ದಿನಗಳ ಬಳಿಕ ಗೋಪಾಲನ್ ಅವರು VRSಗೆ ಅರ್ಜಿ ಸಲ್ಲಿಸಿರುವುದು ಗಮನ ಸೆಳೆದಿದೆ.

