ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯನ್ನು ಆಧಾರವಾಗಿಸಿಕೊಂಡು, ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ಮತದಾರರ ಹೆಸರುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹೇಳಿದೆ. ಅರ್ಜಿಗಳನ್ನು ತಿರಸ್ಕರಿಸಲು ಚುನಾವಣಾ ಆಯೋಗವು ಚುನಾವಣಾ ಸಾಫ್ಟ್ವೇರ್ ಮೇಲೆ ಅವಲಂಬಿಸಿರುವುದನ್ನೂ ನ್ಯಾಯಾಲಯ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಅಮಿತ್ ಎಸ್. ಜಮ್ಸಾಂಡೆಕರ್ ಮತ್ತು ವಾಲ್ಮೀಕಿ ಮೆನೆಝೆಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅರ್ಜಿಯನ್ನು ತಿರಸ್ಕರಿಸುವುದನ್ನು ಹೊರತುಪಡಿಸಿ ಅಧಿಕಾರಿಗಳಿಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಸಾಫ್ಟ್ವೇರ್ ವ್ಯವಸ್ಥೆಯ ಕುರಿತು ಚುನಾವಣಾ ಆಯೋಗ ಹೇಳಿರುವುದಕ್ಕೆ "ತೀವ್ರ ಅಸಮಾಧಾನ" ವ್ಯಕ್ತಪಡಿಸಿದೆ.
ಸಾಂಟಾ ಕ್ರೂಝ್ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಮನೆಗೆ ಸ್ಥಳಾಂತರಗೊಂಡ ಬಳಿಕ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿ, ಒಂದೇ ಕುಟುಂಬದ ಆರು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ.
ಪರೇಶ್ ಸಾಲ್ಗಾಂವ್ಕರ್ ಸಹಿತ ಅರ್ಜಿದಾರರು, ವಿಳಾಸವನ್ನು ನವೀಕರಿಸುವಂತೆ ಬೂತ್ ಮಟ್ಟದ ಅಧಿಕಾರಿ (BLO) ಸೂಚಿಸಿದ್ದ ಹಿನ್ನೆಲೆಯಲ್ಲಿ ಫಾರ್ಮ್ 8 ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ಅರ್ಜಿಗಳನ್ನು ಪರಿಶೀಲಿಸುವ ವೇಳೆ ಅಧಿಕಾರಿಗಳು, ಅವರ ಫೋಟೋ, ಗುರುತಿನ ಚೀಟಿ (EPIC) ವಿವರಗಳು ERONET ವ್ಯವಸ್ಥೆಯಲ್ಲಿ ಲಭ್ಯವಿಲ್ಲ ಎಂಬುದನ್ನು ಪತ್ತೆಹಚ್ಚಿದ್ದಾರೆ. ಅವರ EPIC ವಿವರಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಫಾರ್ಮ್ 8 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಲಾಗಿದೆ.
ತನ್ನ ವಾದ ಮಂಡಿಸಲು ಅವಕಾಶ ನೀಡದೆ ಮತದಾರರ ಹೆಸರುಗಳನ್ನು ಅಳಿಸಲು ಅವಕಾಶ ನೀಡುವ ಕಾನೂನು ನಿಬಂಧನೆ ಯಾವುದು ಎಂದು ಚುನಾವಣಾ ಆಯೋಗವನ್ನು ನ್ಯಾಯಮೂರ್ತಿಗಳು ಇದೇ ವೇಳೆ ಪ್ರಶ್ನಿಸಿದ್ದಾರೆ.
"ನಿಮ್ಮ ಅಧಿಕಾರಿಗಳು ಅಸಹಾಯಕರಾಗಿದ್ದರು ಮತ್ತು ಈ ವಿಚಾರವನ್ನು ಸಂಪೂರ್ಣವಾಗಿ ಸಿಸ್ಟಂ ಮೇಲೆ ಹಾಕಲು ನಿರ್ಧರಿಸಿದರು. ಹೀಗಾಗಿ, ಸಿಸ್ಟಂ ಅರ್ಜಿಯನ್ನು ತಿರಸ್ಕರಿಸಿದೆ ಎಂದು ದಾಖಲಿಸಿದ್ದಾರೆ. ಇದರಿಂದ ನಮಗೆ ತೀವ್ರ ಅಸಮಾಧಾನವಾಗಿದೆ ಎಂದು ಪೀಠವು ಹೇಳಿದೆ.

