ತೀವ್ರ ಕಳವಳಕಾರಿಯಾದ ಶಬರಿಮಲೆ ಪ್ರಕರಣ-ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ-ನಾಳೆ ರಾಜ್ಯ ವ್ಯಾಪಕ ಹರತಾಳ
0
ಡಿಸೆಂಬರ್ 13, 2018
ತಿರುವನಂತಪುರ: ಶಬರಿಮಲೆ ಸನ್ನಿಧಾನಕ್ಕೆ ಮಹಿಳಾ ಪ್ರವೇಶ ಸಮಬಂಧ ಉಂಟಾಗಿರುವ ಬಿಕ್ಕಟ್ಟು ಇನ್ನಷ್ಟು ತೀವ್ರಗತಿ ತಳೆಯುವ ಭೀತಿ ಎದುರಾಗಿದ್ದು, ತಿರುವನಂತಪುರದ ರಾಜ್ಯ ಸೆಕ್ರಟರಿಯೇಟ್ ಮುಂದೆ ಬಿಜೆಪಿ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಗುರುವಾರ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೈದಿದ್ದು, ನಾಳೆ ರಾಜ್ಯ ವ್ಯಾಪಕ ಹರತಾಳಕ್ಕೆ ಬಿಜೆಪಿ ಕರೆನೀಡಿದೆ.
ಪ್ರತಿಭಟನಾ ನಿರತರೊಡನಿದ್ದ ಮುಟ್ಟಾಟ ನಿವಾಸಿ ವೇಣುಗೋಪಾಲ್ ಗುರುವಾರ ಮಧ್ಯಾಹ್ನ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಅಲ್ಲಿಗೆ ತಲಪಿದ ಪೋಲೀಸರು ಹಾಗೂ ಪ್ರತಿಭಟನೆಯಲ್ಲಿದ್ದ ಬಿಜೆಪಿಯ ಇತರ ಕಾರ್ಯಕರ್ತರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದರು. ಬೆಂಕಿಯ ಘಾಸಿಯಿಂದ ತೀವ್ರ ಗಾಯಗೊಂಡಿದ್ದ ವೇಣುಗೋಪಾಲ್ ಚಿಕಿತ್ಸೆಗೆ ಸ್ಪಂಧಸದೆ ಸಂಜೆ 4ರ ವೇಳೆಗೆ ಕೊನೆಯುಸಿರೆಳೆದರು.
ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದ ವೇಣುಗೋಪಾಲ್ ನಾಯರ್ ಪರಮೋಚ್ಚ ನ್ಯಾಯಾಲಯದ ತೀರ್ಪು, ಆ ಬಳಿಕ ರಾಜ್ಯ ಸರಕಾರ ಅದನ್ನು ಅನುಷ್ಠಾನಗೊಳಿಸಲು ತೋರಿಸುತ್ತಿರುವ ಇನ್ನಿಲ್ಲದ ಮುತುವರ್ಜಿಯಿಂದ ಹತಾಶರಾಗಿದ್ದರು. ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗೂ ಕಿವಿಗೊಡದ ಅಧಿಕೃತರ ವರ್ತನೆಯಿಂದ ರೋಸಿದ್ದ ಅವರು, ಅಯ್ಯಪ್ಪನ ಪ್ರಬಲ ಭಕ್ತಿಯುಳ್ಳವರಾಗಿದ್ದರು ಎಂದು ತಿಳಿದುಬಂದಿದೆ.
ಘಟನೆಯನ್ನು ಖಂಡಿಸಿ ನಾಳೆ(ಶುಕ್ರವಾರ)ರಾಜ್ಯ ವ್ಯಾಪಕವಾಗಿ ಬಿಜೆಪಿ ಹರತಾಳಕ್ಕೆ ಕರೆನೀಡಿದೆ. ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಹರತಾಳ ನಡೆಯಲಿದೆ ಎಂದು ಅಧಿಕೃತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


